Tuesday, January 31, 2017

ಮದುವೆ ಪ್ರಸಂಗ

ಅಜ್ಜಿ ನಮ್ಮ ಮನೆಗೆ ಬಂದಿದ್ದಾಗ ಒಂದು ಮಧ್ಯಾಹ್ನ, ನನಗೆ  ಹೊತ್ತು ಕಳೆಯುವುದು ಹೇಗೆಂದು ತೋಚದೆ ಅವರ ಬಳಿ ಹೋಗಿ, ಅವರ ಮದುವೆಯ ಸಂದರ್ಭದ ಕತೆಗಳನ್ನು ಹೇಳುವಂತೆ ಕೇಳಿದೆ. ಆಗ ಅವರು ತಮ್ಮ ನೆನಪನ್ನು ಕೆದಕುತ್ತಾ ಈ ಕತೆಯನ್ನು ನನಗೆ ಹೇಳಿದರು.

"ಇದೆಲ್ಲ ಸುಮಾರು ಅರವತ್ತೈದು ವರ್ಷದ ಹಿಂದಿನ ಕತೆ. ಆಗಿನ್ನೂ ನನಗೆ ಮದುವೆ ಗೊತ್ತಾಗಿರಲಿಲ್ಲ. ನನ್ನ ವಯಸ್ಸಿನ ನನ್ನಿಬ್ಬರು ಗೆಳತಿಯರಿಗೂ ಕೂಡ. ಲಕ್ಷ್ಮಿ ಅಂತ ಒಬ್ಬಳ ಹೆಸರು. ಇನ್ನೊಬ್ಬಳು ವಿಮಲಾ ಅಂತ. ಆ ಲಕ್ಷ್ಮಿಗೆ ಒಬ್ಬ ಅಣ್ಣ ಇದ್ದ - ಚಂದ್ರು ಅಂತ. 

"ವಿಮಲಾಳ ತಂದೆಗೆ ಅವಳನ್ನ ಚಂದ್ರುವಿಗೆ ಕೊಟ್ಟು ಮದುವೆ ಮಾಡಬೇಕು ಅಂತ ಅನ್ನಿಸಿ, ಅದೇ ಮಾತನ್ನ ಲಕ್ಷ್ಮಿಯ ತಂದೆಯೊಂದಿಗೆ ಪ್ರಸ್ತಾಪ ಮಾಡಿದ್ರು. ವಿಮಲಾ ಬಹಳ ಒಳ್ಳೆ ಹುಡುಗಿ. ಅಲ್ಲದೆ, ಅವಳು ಲಕ್ಷ್ಮಿ ಬಹಳ ಒಳ್ಳೆ ಸ್ನೇಹಿತೆಯರಾಗಿದ್ರಿಂದ, ನಾಳೆ ಮದುವೆ  ಆಗಿ ಬಂದಮೇಲೂ ಅತ್ತಿಗೆ - ನಾದಿನೀರು  ಜಗಳವಾಡಿ ಮನೆ ಒಡೆಯೋ ಪ್ರಸಂಗ ಬರಲ್ಲ ಅಂತ ಅವರಿಗೂ ಅನ್ನಿಸರಬೇಕು. ಅವರೂ ಒಪ್ಪಿಕೊಂಡ್ರು. ಲಕ್ಷ್ಮೀಗಂತೂ ವಿಮಲಾ ತನ್ನ ಅತ್ತಿಗೆಯಾಗಿ ಬರ್ತಾಳೆ ಅಂತ ಬಹಳ ಖುಷಿಯಾಯ್ತು. ನನಗೂ ಅಷ್ಟೇ. ನಮ್ಮ ಮನೇಲೆ ಮದುವೆ ನಡಿಯೋ ಅಷ್ಟು ಸಂತೋಷ!

"ಹೀಗಿರುವಾಗ, ಒಂದು ದಿನ ನಾವು ಮೂವರು ಲಕ್ಷ್ಮಿಯ ಮನೇಲಿ ಕೂತು ಹರಟುತ್ತಿದ್ವಿ. ಲಕ್ಷ್ಮಿಯ ತಂದೇನೂ ವಿಮಲಾಳ ತಂದೇನೂ ಹೊರಗಡೆ ಕೂತು ಕೊಟ್ಟು - ಕೊಳ್ಳುವ ವಿಚಾರವಾಗಿ ಏನೋ ಮಾತಾಡ್ತಿದ್ರು. ಇದ್ದಕ್ಕಿದ್ದ ಹಾಗೆ, ವಿಮಲಾ ಹೊರಗೆ ಹೋಗಿ 'ಅಪ್ಪ, ನಂಗೆ ಈ ಮದುವೆ ಬೇಡ' ಅಂದ್ಲು. ನಮ್ಗೆಲ್ಲಾ ಬಹಳ ಆಶ್ಚರ್ಯ ಆಯ್ತು. ಚಂದ್ರು ಅಂತ ಹುಡ್ಗ ಸಿಗೊಕ್ಕೆ ಪುಣ್ಯ ಮಾಡಿರ್ಬೇಕು ಅಂತ ಹಲವಾರು ಬಾರಿ ನಾವುಗಳು ಮಾತಾಡಿಕೊಂಡಿದ್ದುಂಟು. ಈಗ ನೋಡಿದ್ರೆ ಅವಳು ಹೀಗೆ ಹೇಳ್ತಿದ್ದಾಳೆ! ಅವಳ ತಂದೆ ಬಹಳ ನಯವಾಗಿ 'ಯಾಕಮ್ಮ?' ಅಂತ ಕೇಳಿದ್ರು. 'ನಾನು ಈ ಮದುವೆಗೆ ಒಪ್ಪಿದ್ದೇ ಲಕ್ಷ್ಮಿಯ ಜೊತೇಲಿ ಇರಬಹುದು ಅಂತ. ನನಗೆ ಲಕ್ಷ್ಮಿ ಜೊತೇಲೆ ಮದುವೆ ಮಾಡಿ' ಅಂತ ಹೇಳಿ, ಯಾರ ಜೊತೆಗೂ ಇನ್ನೊಂದು ಮಾತಾಡದೆ ಹೊರನಡೆದುಬಿಟ್ಟಳು. 

"ವಿಮಲಾಳ ತಂದೆ 'ಇದ್ಯಾವ ಗಾಳಿ ಮೆಟ್ಟಿಕೊಳ್ತು?' ಎನ್ನುತ್ತಾ ಒಂದಷ್ಟು ನಿಮಿಷ ದಿಕ್ಕೇ ತೋಚದೆ ಕೂತುಬಿಟ್ರು. ನಮಗೂ ಏನು ನಡೀತಿದೇ ಅಂತ ಅರ್ಥ ಆಗ್ಲಿಲ್ಲ. ಲಕ್ಷ್ಮಿಯ ತಂದೆ 'ಹುಚ್ಚು ಹುಡುಗಿ! ಪಾಪ ಮದುವೆಯ ಬಗ್ಗೆ ಹೆದರಿರಬೇಕು. ಮನೆಗೆ ಹೋಗಿ ಸ್ವಲ್ಪ ಸಮಾಧಾನವಾಗಿ ಕೂತು ಮಾತಾಡಿ' ಎಂದು ಅವರಿಗೆ ಧೈರ್ಯ ಹೇಳಿದರು. 

"ಇದಾದ ಒಂದೆರಡು ವಾರಗಳು ಮದುವೆಯ ಬಗ್ಗೆ ಯಾರೂ ಏನೂ ಮಾತಾಡಲಿಲ್ಲ. ಆನಂತರ ಮತ್ತೆ ವಿಮಲಾಳನ್ನು ಕೇಳಿದಾಗ, ಅವಳು ಅದೇ ಉತ್ತರ ಕೊಟ್ಟಳಂತೆ. ಅವಳ ತಂದೆಗೆ ಜಂಘಾಬಲವೇ ಇಲ್ಲದ ಹಾಗಾಯ್ತು. ಏನೂ ತೋಚದೆ ನಮ್ಮಪ್ಪನ ಹತ್ತಿರವೂ, ಲಕ್ಷ್ಮಿಯ ತಂದೆ ಹತ್ತಿರವೂ ಹೇಳಿಕೊಂಡ್ರು. ಯಾರಾದ್ರೂ ಮಾಟ ಮಾಡ್ಸಿರ್ಬೇಕು ಅನ್ನಿಸಿ, ನಮ್ಮೂರಿನ ಬಳಿಯಿದ್ದ ಒಬ್ಬ ಮಂತ್ರವಾದಿ ಹತ್ರ ಹೋದ್ರಂತೆ. ಅವ್ನು ಪ್ರಶ್ನೆ ಹಾಕಿ ನೋಡಿ, ಇದೆಲ್ಲ ಆ ರಮೇಶನ ಆತ್ಮದ್ದೇ ಕಿತಾಪತಿ ಅಂದನಂತೆ. 

"ಆಗ ಒಂದೆರಡು ವರ್ಷದ ಮುಂಚೆ, ನಮ್ಮ ಬೀದಿಲೀ ರಮೇಶ ಅಂತ ಒಬ್ಬ ಹುಡುಗ ಇದ್ದ. ಲಕ್ಶ್ಮೀನಾ ಮದ್ವೆ ಮಾಡ್ಕೋ ಅಂತ ಬಹಳ ಪೀಡಿಸ್ತಿದ್ದ. ನೋಡೋವರಿಗು ಲಕ್ಷ್ಮಿ ನೋಡಿ ಅವಳ ಅಪ್ಪಂಗೆ ಹೇಳಿದ್ಲು. ಅವ್ರು ಊರಿನೋರ ಮುಂದೆ ಅವ್ನಿಗೆ ಬೈದು, ಕಪಾಳಕ್ಕೆ ಹೊಡೆದು ಔಮಾನ ಮಾಡಿದ್ರು. ಅದಾದ ಸ್ವಲ್ಪ ದಿನಕ್ಕೆ ಅವ್ನು ವಿಷ ತೊಗೊಂಡು ಸತ್ತೋದ. ಈಗ ಅವನು ವಿಮಲಾಳ ಒಳಗೆ ಸೇರ್ಕೊಂಡು ಹೀಗೆಲ್ಲ ಮಾಡ್ತಿದಾನೆ ಅಂತ ಆ ಮಂತ್ರವಾದಿ ಹೇಳ್ದ. 

"ಮದ್ವೆ ದಿನ ತೀರಾ ಹತ್ರ ಆಗೋದ್ರೊಳ್ಗೆ ಇದನೆಲ್ಲ ಕಳ್ಕೋಬೇಕು ಅಂತ ವಿಮಲಾಳ ತಂದೆ ಆ ಮಂತ್ರವಾದೀನಾ ಮನೆಗೇ ಕರಿಸಿದ್ರು. ನಾನು ನೋಡಕ್ಕೆ ಹೋಗ್ಲಿಲ್ಲ. ಆದ್ರೆ, ಪಕ್ಕದ ಮನೇಲಿ ನಿಂತು ಎಲ್ಲ ಕೇಳ್ತಾಯಿದ್ದೆ. ಅವ್ನು ಭೂತ ಬಿಡಿಸಿದನೋ ಏನೋ ಗೊತ್ತಿಲ್ಲ. ವಿಮಲಾ ನೋವಿನಿಂದ ನರಳಿದ್ದು, ಜೋರಾಗಿ ಚೀರಿದ್ದು ಮಾತ್ರ ಗೊತ್ತು ನಂಗೆ. ಮಂತ್ರವಾದಿ ಹೋದ ಮೇಲೆ ಹೋಗಿ ನೋಡಿದ್ರೆ, ಅವಳು ಅತ್ತೂ ಅತ್ತೂ, ಸುಸ್ತಾಗಿ ಮಲಗಿದ್ದಳು. ಅವಳ ಮೈಮೇಲೆಲ್ಲಾ ಬರೆಗಳು. ಅದ್ಯಾವ ಕಡ್ಡೀಲಿ ಹೊಡೆದಿದ್ನೋ ಹಾಳಾದವ್ನು! 

"ಬರೆಯ ಗಾಯಗಳು ಮರೆಯಾಗೋ ವೇಳೆಗೆ ಮದುವೆಯ ದಿನ ಬಂದೇಬಿಡ್ತು. ವಿಮಲಾಳ ತಂದೆಗಿದ್ದ ಒಂದೇ ಒಂದು ಆತಂಕ ಅಂದ್ರೆ ಮದುವೆಯ ದಿನ ಯಾರಾದ್ರೂ ಬಂದು ಅವರ ಮಗಳಿಗೆ ಮೆಟ್ಕೊಂಡಿದ್ದ ಗಾಳೀ ಬಗ್ಗೆ ಕೇಳಬಹುದು ಅಂತ. ಪುಣ್ಯಕ್ಕೆ, ಹಾಗೇನು ಆಗ್ಲಿಲ್ಲ. ಎಲ್ಲ ಸುಸೂತ್ರವಾಗಿ ಮುಗೀತು. 

"ಮದುವೆಯಾಗಿ ಮೂರು ತಿಂಗಳಾಗಿರಬೇಕು. ಒಂದು ದಿನ, ಮನೇಲಿ ಯಾರು ಇಲ್ಲದ ಸಮಯ ನೋಡಿ, ವಿಮಲಾ ವಿಷ ತೊಗೊಂಡು ಪ್ರಾಣ ಕಳ್ಕೊಂಡ್ಳು. ರಮೇಶ ಆ ಮನೆ ಮೇಲೆ ಸೇಡು ತೀರಿಸ್ಕೊಂಡ ಅಂತ ಊರಲ್ಲಿ ಎಲ್ರೂ ಮಾತಾಡ್ಕೊಂಡ್ರು. ಆಮೇಲೆ, ಲಕ್ಷ್ಮಿ ಮದುವೆಯಾಗಿ ಬೇರೆ ಮನೆಗೆ, ಬೇರೆ ಊರಿಗೆ ಹೋದ್ಲು. ನಾನು ನಿಮ್ಮ ತಾತನ್ನ ಮನೆಗೆ ಬಂದೆ. ಈಗ ಅವ್ಳು ಎಲ್ಲಿದ್ದಾಳೋ? ಅಥವಾ ಇಲ್ಲವೇ ಇಲ್ವೋ" ಎಂದು ಹೇಳುತ್ತಾ ಅಜ್ಜಿ ಹೊರಗಡೆ ಓಡಾಡುತ್ತಿದ್ದ ಗಾಡಿಗಳ ಕಡೆ ಮುಖ ಮಾಡಿದರು. .

ಅಜ್ಜಿಯನ್ನು ಅವರ ನೆನಪುಗಳ, ಭಾವನೆಗಳ ಜೊತೆ ಇರಲು ಬಿಟ್ಟು ಒಳನಡೆಯಲು ಏಳಬೇಕೆಂದಿದ್ದಾಗ ಅಜ್ಜಿಯೇ ಮಾತಿಗಿಳಿದರು. "ನಂಗೇನನ್ಸತ್ತೆ ಗೊತ್ತಾ? ವಿಮಲಂಗೆ ಯಾವ ಭೂತಾನೂ ಮೆಟ್ಟ್ಕೊಂಡಿರಲಿಲ್ಲ. ಅವ್ಳಿಗೆ ಹುಡ್ಗನ್ನ ಬದ್ಲು ಒಬ್ಬ ಹುಡ್ಗಿ ಮೇಲೆ ಪ್ರೀತಿ ಇತ್ತು. ತಪ್ಪೇನು? ಅಬ್ಬಬ್ಬಾ ಅಂದ್ರೆ ಮದ್ವೆ ಆಗ್ತಿರ್ಲಿಲ್ಲ, ಅಷ್ಟೇ ತಾನೇ? ಆ ಮಂತ್ರವಾದಿನಾ ಕರ್ಸಿ ಮದ್ವೆ ಏನೋ ಮಾಡ್ಸಿದ್ರು. ಆದ್ರೇ, ಅವ್ನನ್ನ ಕರೆಸ್ದೆ ಇದ್ದಿದ್ರೆ, ವಿಮಲಾ ಇನ್ನಷ್ಟು ದಿನ ಜೀವಂತವಾಗಿ ಇರ್ತಿದ್ಲೋ ಏನೋ" ಎಂದು ಹೇಳುವಾಗ ಅಜ್ಜಿಯ ಧ್ವನಿ ಭಾರವಾಗಿತ್ತು. "ಈ ಮಾತನ್ನ ನಾನೇನಾದ್ರೂ ಆಗ ಹೇಳಿದ್ದಿದ್ರೆ, ಅವಳ ಜೊತೆ ನಂಗೂ ಆ ಮಂತ್ರವಾದಿ ಬರೇ ಬೀಳೋವರ್ಗು ಹೊಡೀತಿದ್ನೇನೋ" ಎಂದು ಹೇಳಿ, ವ್ಯಂಗ್ಯವಾಗಿ ನಗುತ್ತಾ ಅಜ್ಜಿ ಒಳನಡೆದರು. 



No comments:

Post a Comment