Wednesday, January 18, 2017

ಶ್ರಾದ್ಧದ ಸುತ್ತಾಮುತ್ತಾ...

ಮಸುಕು ಮಸುಕಾದ ಬಾಲ್ಯದ ನೆನಪುಗಳಲ್ಲಿ ನಮ್ಮ ತಾತ ತೀರಿಹೋಗಿದ್ದು ಸಹ ಒಂದು. ಆಗ ನನಗೆ ಮೂರೂ ತುಂಬಿರಲಿಲ್ಲ. ನಮ್ಮತ್ತೆಯ ಮನೆಯ ವೆರಾಂಡಾದಲ್ಲಿ ಬಿಳಿಯ ಬಟ್ಟೆಯಲ್ಲಿ ಮಲಗಿದ್ದ ತಾತ ಏಳುತಿಲ್ಲವಲ್ಲಾ ಎಂದು ಕೇಳಿದ್ದು ಅಸ್ಪಷ್ಟವಾಗಿ ಜ್ಞಾಪಕವಿದೆ (ಅಥವಾ ಹಾಗೆ ನಾನು ಚಿತ್ರಿಸಿಕೊಂಡಿದ್ದೇನೆಯೋ? ಗೊತ್ತಿಲ್ಲ!). ಸಾವಿನ ಬಗ್ಗೆ ಅರಿವಿಲ್ಲದ ಆ ವಯಸ್ಸಿನಲ್ಲಿ, ಇನ್ನು ಮುಂದೆ ತಾತ ಮನೆಯಲ್ಲಿ ನಮ್ಮ ಜೊತೆ ಇರುವುದಿಲ್ಲ ಎಂಬುದೊಂದು ಬಿಟ್ಟರೆ ಬೇರೇನೂ ತಿಳಿಯಲಿಲ್ಲ. (ಸಾವಿನ ಬಗ್ಗೆ ಈಗ 'ಅರಿವಿ'ದೆ ಎಂದು ನಾನು ಹೇಳುತ್ತಿಲ್ಲ. ಹಾಗೆ ಭಾವಿಸಲೂಬಾರದು.) 

ತದನಂತರ, ಪ್ರತೀ ವರ್ಷ ನಾನು ನಮ್ಮ ತಾತನ ತಿಥಿಗಾಗಿ ಕಾಯುತ್ತಿದ್ದೆ. ಏಕೆಂದರೆ, ತಿಥಿಮನೆಯ ಹುಳಿಗೆ ಇರುವ ರುಚಿ ಬೇರೆಯ ಹುಳಿಗಳಿಗೆ  ಖಂಡಿತ ಇರುವುದಿಲ್ಲ. ಅದೂ ಅಲ್ಲದೆ, ವಡೆ-ಪಾಯಸ, ಆಂಬೊಡೆಗಳ ಜೊತೆಗೆ ಸಜ್ಜಪ್ಪವೋ ರವೆಯುಂಡೆಯೋ ಇರುತ್ತಿತ್ತು. ಅಡುಗೆಯವರಿಗೆ ಸ್ವಲ್ಪ ಹೆಚ್ಚು ದುಡ್ಡು ಕೊಟ್ಟರೆ, ಎರಡು-ಮೂರು ದಿನಗಳಿಗಾಗುವಷ್ಟು ಭಕ್ಷ್ಯಗಳನ್ನು ಪಾರ್ಸೆಲ್ ಕೊಡುತ್ತಿದ್ದರು! ಏನೇ ಆಗಲಿ, "ಬ್ರಾಹ್ಮಣಂ ಭೋಜನಪ್ರಿಯಂ" ಅಲ್ಲವೇ?!

ಇದರ ಜೊತೆಗೆ ಇನ್ನೊಂದು ಕಾರಣವೂ ಇತ್ತು. ಬೇರೆ ಬೇರೆ ಊರುಗಳಲ್ಲಿದ್ದ  ನಮ್ಮ ಇಬ್ಬರು ದೊಡ್ಡಪ್ಪಂದಿರು ಬೆಂಗಳೂರಿಗೆ ವರ್ಷಕ್ಕೊಮ್ಮೆ ಬರುತ್ತಿದ್ದರು - ನಮ್ಮ ತಾತನ ತಿಥಿಗೆ. ಹೀಗಾಗಿ ನಮ್ಮ ತಾತನ ತಿಥಿ ಎನ್ನುವುದಕ್ಕಿಂತ ಕುಟುಂಬದ 'ಗೆಟ್-ಟುಗೆತರ್' ಎಂದೇ ನಾನು ಭಾವಿಸಿದ್ದೆ. (ಈಗ ಎಲ್ಲರೂ ಒಂದೇ ಊರಿನಲ್ಲಿ ಇರುವುದರಿಂದ ಹಬ್ಬದ ಸಂದರ್ಭಗಳಲ್ಲಿಯೂ  ಗೆಟ್-ಟುಗೆತರ್ ನಡೆಯುತ್ತದೆ.) ನಮ್ಮ ದೊಡ್ಡಪ್ಪ ಪ್ರತೀ ಬಾರಿ  ಊರಿಗೆ ಹೋಗುವ ಮುನ್ನ, ಮನೆಯ ಬಳಿಯಿದ್ದ ವಿ.ಬಿ. ಬೇಕರಿಗೋ ಬಟರ್ ಸ್ಪಾಂಜಿಗೋ ಹೋಗಿ ಬಿಸ್ಕತ್ತು, ಖಾರ ಸೇವೆ ಮೊದಲಾದ ತಿಂಡಿಗಳನ್ನು ಕೊಳ್ಳುತ್ತಿದ್ದರು. ಆ ಸಂದರ್ಭಗಳಲ್ಲಿ ಎಲ್ಲರಿಗಿಂತ ಚಿಕ್ಕವನಾದ ನನ್ನನ್ನೂ ಕರೆದುಕೊಂಡು ಹೋಗಿ ಏನಾದರೂ ಕೊಡಿಸುತ್ತಿದ್ದರು. ಮನೆಯಲ್ಲಿ ಎಷ್ಟೇ ತಿಂದರು, ಇನ್ನೊಬ್ಬರು ಕೊಡಸಿದ ತಿಂಡಿಯೇ ಹೆಚ್ಚು ರುಚಿಯಲ್ಲವೇ? ಈ ಎಲ್ಲದರ ಪರಿಣಾಮವಾಗಿ ನನಗೆ ನಮ್ಮ ತಾತನ ತಿಥಿ ಬಹಳ ಮುಖ್ಯವಾಗಿತ್ತು. 

ತಾತ ತೀರಿಹೋದ ಐದು ವರ್ಷಗಳ ನಂತರ, ನಮ್ಮ ದೊಡ್ಡಪ್ಪಂದಿರು ವರ್ಷಕ್ಕೆ ಎರಡೆರಡು ಬಾರಿ ಬರಲು ಶುರು ಮಾಡಿದರು - ನಮ್ಮ ಅಜ್ಜಿಯ ತಿಥಿಗೋಸ್ಕರ. ಮನೆಯಲ್ಲಿ ಯಾರಾದರೂ ಸತ್ತಾಗ 'ಗರುಡ ಪುರಾಣ'ವನ್ನು ಓದುವುದು ವಾಡಿಕೆ. ನಮ್ಮಪ್ಪ ಸಹ ಓದುತ್ತಿದ್ದರು. ಸಾಮಾನ್ಯವಾಗಿ ಇಂತಹ ಪುಸ್ತಕಗಳನ್ನು ಮಕ್ಕಳ ಕೈಗೆ ಸಿಗದ ಹಾಗೆ ಇಡುತ್ತಾರೆ. ನಾನು ಈ ಪುಸ್ತಕ ಇರುವ ಸ್ಥಳ ನೋಡಿಕೊಂಡು ಕದ್ದು ಓದಿ, ಬೈಸಿಕೊಂಡೆ. ಇದಕ್ಕೆ ಪ್ರಚೋದಿಸಿದ್ದು ಮಾತ್ರ ನಮ್ಮ ಎರಡನೇ ದೊಡ್ಡಪ್ಪ. ವೈಕುಂಠ ಸಮಾರಾಧನೆಯವರೆಗೂ ನಮ್ಮ ಮನೆಯಲ್ಲೇ ಇದ್ದ ಅವರು,  ರಕ್ತ, ಕೀವುಗಳು ತುಂಬಿದ್ದ ವೈತರಣೀ ನದಿಯನ್ನೂ ಪರಲೋಕದ ದಾರಿಯಲ್ಲಿ ಅನುಭವಿಸಬೇಕಾದ ಕಾರ್ಪಣ್ಯಗಳನ್ನೂ ಅತಿ ರೋಚಕವಾಗಿಯೂ ಭಯಂಕರವಾಗಿಯೂ ವರ್ಣಿಸಿದ್ದರು. ಕೆಟ್ಟ ಕುತೂಹಲವನ್ನು ತಡೆಯಲಾರದೆ, ನಾನು ಅದನ್ನು ಪುಸ್ತಕದಲ್ಲೇ ಓದಲು ಪ್ರಯತ್ನಿಸ ಹೋಗಿ ಸಿಕ್ಕಿಬಿದ್ದೆ. ಅದ್ಯಾಕೋ, ಈವರೆಗೂ ಆ ಆಸೆ ಫಲಕಾರಿಯೇ ಆಗಿಲ್ಲ. 

ಸ್ವಲ್ಪ ತಿಳಿವಳಿಕೆ ಬಂದ ಮೇಲೆ, ತಿಥಿ ಮಾಡುವುದು ನಿರರ್ಥಕ ಎಂದು ಅನಿಸತೊಡಗಿತು. ಈ ವಿಚಾರವಾಗಿ ಮನೆಯಲ್ಲಿ ಹಲವಾರು ಬಾರಿ ಚರ್ಚೆಗಳೂ ನಡೆದಿವೆ. 
ಪ್ರತೀ ಬಾರಿಯೂ ಅದದೇ ಬ್ರಾಹ್ಮಣರನ್ನು ಕರೆದು ತಿನ್ನಿಸುವ ಬದಲು ನಿಜಕ್ಕೂ ಅಗತ್ಯವಿದ್ದವರಿಗೆ ಅನ್ನದಾನ ಮಾಡುವುದು ಒಳ್ಳೆಯದಲ್ಲವೇ? ಆ ಬ್ರಾಹ್ಮಣರೋ! ಊಟದ ಜೊತೆಗೆ ಪಂಚೆ ಶಲ್ಯಗಳನ್ನು ಕೊಟ್ಟರೆ, ದಕ್ಷಿಣೆಯಾಗಿ ಕೊಟ್ಟ ಹಣದಲ್ಲಿ ಚೌಕಾಶಿ ಮಾಡುತ್ತಾರೆ. 

ತಿಥಿ ಮಾಡುವಾಗ ಕರ್ತೃಗಳು ಉಪವಾಸವಿರಬೇಕು. ಆದರೆ ನಮ್ಮ ದೊಡ್ಡಪ್ಪ ಒಬ್ಬರು ಬರೀ ಅವಲಕ್ಕಿಯನ್ನೋ ಮೊಸರವಲಕ್ಕಿಯನ್ನೋ ತಿನ್ನುತ್ತಾರೆ. ಅವಕ್ಕೆ ದೋಷವಿಲ್ಲವಂತೆ. ಈ ಶಾಸ್ತ್ರಗಳನ್ನು ರಚಿಸಿದವರು ಇಂತಹ "ಟೆಕ್ನಿಕಲ್ ಲೂಪ್ಹೋಲ್"ಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ರಚಿಸಿದರೋ ಏನೋ ಎಂದು ಅನುಮಾನವಾಗುತ್ತದೆ! 

ನಮ್ಮ ತಾತನ ತಿಥಿ  ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಇರುತ್ತದೆ. ಅದೇ ಸಮಯಕ್ಕೆ ಸಾಮಾನ್ಯವಾಗಿ ಭಾರತದ ಯಾವುದಾದರೂ ಕ್ರಿಕೆಟ್ ಸರಣಿ ನಡೆಯುತ್ತಿರುತ್ತದೆ. ಇಂಥ ಸಂದರ್ಭದಲ್ಲಿ, ತಿಥಿ ಮಾಡಿಸುವ ಜೋಯಿಸರು, ಬ್ರಾಹ್ಮಣಾರ್ಥಕ್ಕೆ ಬಂದವರಾದಿಯಾಗಿ ಎಲ್ಲರೂ ಬಂದು ಸ್ಕೋರ್ ಕೇಳಿ ಹೋಗುತ್ತಾರೆ. 

ವಯಸ್ಸಿನ ಜೊತೆಗೆ ಹಸಿವು ತಡೆಯುವ ಶಕ್ತಿಯೂ ಕಡಿಮೆಯಾಗುತ್ತದೆ ಅನಿಸುತ್ತದೆ. ಏಕೆಂದರೆ, ಪ್ರತೀ ಬಾರಿಯೂ ಯಾವುದೋ ಒಂದು ಕಾರಣಕ್ಕೆ ನಮ್ಮಪ್ಪ ದೊಡ್ಡಪ್ಪಂದಿರಿಂದ ಗೊಣಗಾಟ - ಕಿರುಚಾಟಗಳು ನಡೆದೇ ನಡೆಯುತ್ತವೆ. 

ಇಷ್ಟಾದರೂ ಪ್ರತಿ ವರ್ಷ ತಿಥಿ ಮಾಡಿಯೇ ಮಾಡುತ್ತಾರೆ. ಇಲ್ಲದಿದ್ದರೆ ತಾತ - ಅಜ್ಜಿಯರ ಆತ್ಮಕ್ಕೆ ಶಾಂತಿ ಇರುವುದಿಲ್ಲ ಎಂದು ಇವರುಗಳ ನಂಬಿಕೆ. 

ಮನೆಯಿಂದ ಹೊರಗಿರುವ ನನಗೆ ತಾತನ ತಿಥಿ ತಪ್ಪುತ್ತದೆ. ಆ ದಿನದಂದು ಮನೆಯಲ್ಲಿ ಊಟಕ್ಕೆ ಕುಳಿತ ನಂತರವೇ ನಾನು ಊಟ ಮಾಡಿದ ಸಂದರ್ಭವೂ ಇದೆ. ಆನಂತರ "ಅದೇಕೆ ಹಾಗೆ ಮಾಡಿದೆ?" ಎಂದು ನನ್ನನ್ನು ನಾನೇ ಕೇಳಿಕೊಂಡದ್ದೂ ಇದೆ.

ಮನೆಗೆ ಹೋದಾಗಲೆಲ್ಲ ನಾನು ಅಜ್ಜಿಯ ತಿಥಿಗೆ ಕಾಯುತ್ತೇನೆ - ವಡೆ-ಪಾಯಸದ ಆಸೆಯಲ್ಲಿ!  




No comments:

Post a Comment