Saturday, January 7, 2017

ನಿರ್ಣಯ

ಕಳೆದ ಸಲ ಊರಿಗೆ ಹೋಗಿದ್ದಾಗಿನ ಮಾತು. ಊಟದ ನಂತರ ನಮ್ಮ ಮಾವನೊಡನೆ ಜಗುಲಿಯ ಮೇಲೆ ಕುಳಿತು ಹರಟುತ್ತಿದ್ದೆ. ನಮ್ಮನ್ನು ನೋಡಿದ ವೆಂಕಟೇಶಬಾಬು ಬಂದು ಸ್ವಲ್ಪ ದೂರದಿಂದಲೇ "ನಮಸ್ಕಾರ ಬುದ್ದಿ" ಎನ್ನುತ್ತಾ ನಿಂತ. ಅಷ್ಟು ದೂರದಿಂದಲೇ ಅವನು ಕುಡಿದಿದ್ದ ಎಂದು ಗೊತ್ತಾಗುತ್ತಿತ್ತು. ವೆಂಕಟೇಶಬಾಬು ನಮಗೇನು ಹೊಸಬನಲ್ಲ. ನನಗೆ ನೆನಪಿದ್ದಾಗಿನಿಂದಲೂ ಅವನು ನಮ್ಮ ಮಾವನ ಮನೆಯ ಕೆಲಸಗಳಲ್ಲಿ ನೆರವಾಗುತ್ತಿದ್ದ. ನನ್ನ ಸೋದರ ಸಂಬಂಧಿಗಳೆಲ್ಲ, ಅವನ ವಯಸ್ಸನ್ನು ಲೆಕ್ಕಿಸದೆ, ಅವನನ್ನು "ಹೋಗೋ", "ಬಾರೋ" ಎಂದೇ ಮಾತಾಡಿಸುತ್ತಿದ್ದರು.  ಅವನೂ ಎಂದು ಎದುರಾಡಿರಲಿಲ್ಲ. ಆದರೂ, ನಾನು "ಬನ್ನಿ", "ಹೋಗಿ" ಎಂದೇ ಕೂಗುತ್ತಿದ್ದೆ. ಕುಡಿದ ಅಮಲಿನಲ್ಲಿ ಇಂಗ್ಲಿಷ್ ಮಾತಾಡುತ್ತಾನೆಂದು ಪ್ರತೀತಿ ಇತ್ತು ಅವನ ಬಗ್ಗೆ. ಆದರೆ ನಾನು ಯಾವತ್ತೂ ಕೇಳಿರಲಿಲ್ಲ. ಅವನ, ಮಾವನ ನಡುವಿನ ಮಾತಿನಲ್ಲಿ ಎಲ್ಲಾದರೂ ಇಂಗ್ಲಿಷ್ ಮಾತಾಡಬಹುದೇನೋ ಎಂದು ನಾನು ಗಮನಿಸುತ್ತಾ ಕುಳಿತೆ. ಅವನ ಬಾಯಿಂದ ಹೊರಟ  ಹೆಂಡದ ದುರ್ನಾತ ಬಿಟ್ಟರೆ ಬೇರೇನೂ ಗಿಟ್ಟಲಿಲ್ಲ. "ಏನ್ರಿ ಬಾಬು, ನಿಮಗೆ ಮದ್ವೆ ಗಿದ್ವೆ ಆಗಿದ್ಯೋ?" ಎಂದು ಅಮಾಯಕವಾಗಿ ಕೇಳಿದೆ, ಮಾತಿಗಿಳಿಯುತ್ತಾ. ಅದೇನಾಯಿತೋ, ಬಾಬು ಎದ್ದು ಹೊರಟೇ ಬಿಟ್ಟ. "ಏನಾಯಿತು?" ಎಂದು ಮಾವನ್ನ ಕೇಳಿದೆ. ಆಗ ಅವರು ಬಾಬುವಿನ ಕಥೆ ಹೇಳಿದರು.

ಚಿಕ್ಕವನಿದ್ದಾಗಿನಿಂದಲೂ ಬಾಬು ನಮ್ಮ ಮನೆಯ ಸಣ್ಣ ಪುಟ್ಟ ಕೆಲಸಗಳಿಗೆ ಆಳಾಗಿ ದುಡಿಯುತ್ತಿದ್ದ. ಅಷ್ಟೇ ಅಲ್ಲ, ಮನೆಯಲ್ಲಿ ಯಾವುದೇ ಮದುವೆ, ಮುಂಜಿ, ತಿಥಿ-ವೈಕುಂಠಗಳು ನಡೆದರೂ, ಅಲ್ಲಿ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ಬಾಬು ಊರಿನಲ್ಲೇ ಅವರಿವರ ಬಳಿಯೂ ಕೆಲಸ ಮಾಡುತ್ತಾ ತನ್ನದು ಎನ್ನುವ ಒಂದು ಸಣ್ಣ ಮನೆಯನ್ನೂ ಬಾಡಿಗೆಗೆ ಮಾಡಿಕೊಂಡ. ಅವನ ಮದುವೆಯಲ್ಲಿ ನಮ್ಮ ಮಾವನೇ ಹೆಣ್ಣಿಗೆ ತಾಳಿ ಮಾಡಿಸಿ ಕೊಟ್ಟರು . ಮದುವೆಯ ನಂತರ ಬಾಬು ಅವನ ಹೆಂಡತಿ ಮಾದೇವಿಯೊಂದಿಗೆ ಬಂದು, ನಮ್ಮ ಅಜ್ಜಿಯ ಹಾಗು ಅತ್ತೆ - ಮಾವನ ಆಶೀರ್ವಾದ ಪಡೆದು ಹೋಗಿದ್ದ. ಮೂರ್ನಾಲ್ಕು ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು, ಮಗುವಾಗಿರಲಿಲ್ಲ ಎನ್ನುವುದೊಂದು ಬಿಟ್ಟರೆ.

ಅದೊಂದು ಸಲ, ಬಾಬುವಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು - ಯಾವುದೋ ದೊಡ್ಡ ಅಪಾರ್ಟ್ಮೆಂಟ್ ನಿರ್ಮಾಣದ ಕಾಮಗಾರಿ. ಊರಿನಲ್ಲಿ ಅವನು ಮಾಡುತ್ತಿದ್ದ ಕೆಲಸಗಳಿಗಿಂತ ಹೆಚ್ಚಿನ ಸಂಬಳ ಸಿಕ್ಕುತ್ತದೆ ಎಂದು ಅವನೂ ಹೊರಟ, ಮಾದೇವಿಯನ್ನು ಊರಿನಲ್ಲೇ ಬಿಟ್ಟು. ಮೊದಲ ತಿಂಗಳು ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ. ಆಮೇಲೆ, "ಸುಮ್ಮನೆ ಖರ್ಚು ಯಾಕೆ?" ಎಂದು ತಿಂಗಳ ಮೊದಲಿನಲ್ಲಿ ಬಂದು ಅವಳ ಕೈಗೆ ಸ್ವಲ್ಪ ದುಡ್ಡು ಕೊಟ್ಟು ಹೋಗುತ್ತಿದ್ದ. ಸುಮಾರು ಆರೇಳು ತಿಂಗಳ ನಂತರ ಬಾಬು ಊರಿಗೆ ವಾಪಸ್ಸಾದ, ಬೆಂಗಳೂರಿನ ಕೆಲಸ ಮುಗಿದ ಮೇಲೆ.

ಹೋಗುವ ಮೊದಲು ಆಗೊಮ್ಮೆ ಈಗೊಮ್ಮೆ ಕುಡಿಯುತ್ತಿದ್ದ ಬಾಬು, ಈಗ ದಿನವೂ ಕುಡಿಯಲು ಶುರು ಮಾಡಿದ. ಅಷ್ಟೇ ಆಗಿದ್ದರೆ ಮಾದೇವಿಯೂ ಸಹಿಸುತ್ತಿದ್ದಳೋ ಏನೋ. ಆದರೆ, ಕುಡಿದ ಅಮಲಿನಲ್ಲಿ ಅಕ್ಕಪಕ್ಕದ ಮನೆಯವರಿಗೆ ಕೇಳುವಂತೆ "ನನಗೆ ಒಂದು ಮಗು ಹೆತ್ತು ಕೊಡಕ್ಕೆ ಆಗಲ್ವೇನೇ?" ಎಂದು ಬಯ್ಯಬಾರದ ಪದಗಳಲ್ಲಿ ಬಯ್ಯಲು ಶುರು ಮಾಡಿದ. ರೋಸಿ ಹೋದ ಮಾದೇವಿ, ನಮ್ಮ ಮನೆಯ ಹಿತ್ತಲಿನಲ್ಲಿ ಕುಕ್ಕರುಗಾಲಲ್ಲಿ ಕುಳಿತು  ಅವಳ ಗೋಳಿನ ಕಥೆಯನ್ನು ನಮ್ಮ ಅಜ್ಜಿ, ಅತ್ತೆಗೆ ಹೇಳಿದಳಂತೆ. ಇವರುಗಳು ನಮ್ಮ ಮಾವನಿಗೆ ಹೇಳಿದರಂತೆ, ಬಾಬುವಿಗೆ ತಿಳಿಹೇಳಲು. ನಮ್ಮ ಮಾವನೂ  ಅವನನ್ನು ಕರೆದು ಚೆನ್ನಾಗಿ ಬಯ್ದರು. ಅವರ ಭಯಕ್ಕೋ ಏನೋ, ಸ್ವಲ್ಪ ದಿನಗಳ ಕಾಲ ಬಾಬು ಕುಡಿಯುವುದನ್ನು ಬಿಟ್ಟನಂತೆ; ಹೆಂಡತಿಯನ್ನು ಹೀಯಾಳಿಸುವುದನ್ನು ಕೂಡ. ಆದರೆ, ಅವನು ಕುಡಿಯುವುದನ್ನು ಬಿಟ್ಟರೂ, ಹೆಂಡ ಅವನನ್ನು ಬಿಡಲಿಲ್ಲ. ಅವನ ಚಟ ಮತ್ತೆ ಶುರುವಾದಾಗ, ಮಾದೇವಿಗೆ ದಿಕ್ಕೇ ತೋಚದಾಯಿತು. ಆಗ ಅವಳಿಗೆ ಸಾಂತ್ವನ ಹೇಳಿದವನೇ ಎದುರು ಮನೆಯ ಶೇಖರ.

ಶೇಖರನಿಗೆ ಈಗೆರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಊರ ಹಬ್ಬಕ್ಕೆಂದು ಹೋದ ಹೆಂಡತಿ ಅದ್ಯಾಕೋ ವಾಪಸ್ಸು ಬರಲೇ ಇಲ್ಲ. ಇವನು ವರದಕ್ಷಿಣೆಗಾಗಿ ಗೋಳುಹೊಯ್ದುಕೊಳ್ಳುತ್ತಿದ್ದನೆಂದೂ, ಹೆಂಡತಿಗೆ ಹೊಡೆಯುತ್ತಿದ್ದನೆಂದೂ ಅಲ್ಲಲ್ಲಿ  ಗುಸುಗುಸು  ಹಬ್ಬಿತ್ತು. ಇಷ್ಟಾಗಿಯೂ, ಮಾದೇವಿಗೆ ಇವನೊಡನೆ ಸ್ನೇಹವಾಯಿತು. ಕ್ರಮೇಣ, ಸ್ನೇಹ ಸಂಬಂಧವಾಯಿತು. ಇವರ ಬಗ್ಗೆ ಅವರ ಬೀದಿಯ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರೂ, ಬಾಬುವಿಗೆ ಹೇಳುವ ಧೈರ್ಯ ಯಾರಿಗೂ ಮೂಡಲಿಲ್ಲ. ನಮ್ಮ ಮಾವನಿಗೆ ತಿಳಿದೇ ಇರಲಿಲ್ಲವಂತೆ. ತಿಳಿದಿದ್ದರೆ, ಮಾದೇವಿಯನ್ನು ಕರೆದು ತಿಳಿಹೇಳುತ್ತಿದ್ದರೋ ಏನೋ.

ಶೇಖರ ಮಾದೇವಿಯರ ಸಂಬಂಧ ಎಷ್ಟು ಗಾಢವಾಯಿತೆಂದರೆ, ಬಾಬು ಬೆಂಗಳೂರಿಗೆ ಅಥವಾ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದಾಗ, ಶೇಖರ ಬಾಬುವಿನ ಮನೆಯಲ್ಲೇ ಇರುತ್ತಿದ್ದ. ಹೀಗಿರುವಾಗ, ಒಂದು ದಿನ, ಬೆಂಗಳೂರಿಗೆ ಹೋಗಿದ್ದ ಬಾಬು ಇದ್ದಕ್ಕಿದ್ದಂತೆ ವಾಪಸ್ಸು ಬಂದ, ಮಾದೇವಿಗೂ ತಿಳಿಸದೆಯೇ. ಅದು ಹೇಗೆ ಬೀದಿಯವರೆಲ್ಲರಿಗೂ ತಿಳಿಯಿತೋ ಏನೋ? ಈ ದೃಶ್ಯವನ್ನು ನೋಡಲು ಎಲ್ಲರೂ ಅವರವರ ಮನೆಯ ಬಾಗಿಲುಗಳ ಮುಂದೆ ಹಾಜರಾದರು. ಮನೆಗೆ ಹೋದ ಬಾಬು ಶೇಖರನನ್ನು ಕಂಡಾಗ ಒಂದು ಮಾತೂ ಆಡಲಿಲ್ಲ. ಶೇಖರ ತಲೆಬಗ್ಗಿಸಿ ಹೊರನಡೆದು ತನ್ನ ಮನೆ ಸೇರಿಕೊಂಡ. ಹೊಡೆದಾಟ ಬಡಿದಾಟಗಳನ್ನು ನಿರೀಕ್ಷಿಸಿದ್ದ  ಜನ ನಿರಾಸೆಯಿಂದ ಮನೆಯೊಳಕ್ಕೆ ಹೋದರು.

ಎರಡು ಮೂರು ದಿನಗಳ ನಂತರ, ವೆಂಕಟೇಶಬಾಬು ಮಾದೇವಿಯನ್ನು ಕರೆದುಕೊಂಡು ಹೋಗಿ ಶೇಖರನ ಮನೆಯಲ್ಲಿ ಬಿಟ್ಟು ಬಂದ. ಅಷ್ಟೇ ಅಲ್ಲ, ಕೈಗೆ ಸ್ವಲ್ಪ ಹಣವನ್ನೂ ಕೊಟ್ಟನಂತೆ. ಇದೆಲ್ಲಾ ಆಗಿ ನಾಲ್ಕು ವರ್ಷಗಳಾಗಿವೆ. ಅವರ ನಡುವೆ ಅದೇನು ನಿರ್ಣಯವಾಯಿತೋ ಗೊತ್ತಿಲ್ಲ. ಈಗಲೂ, ಬಾಬುವಿಗೆ ಹುಷಾರಿಲ್ಲದಿದ್ದಾಗ ಅಥವಾ ಬೇರೆ ಅನಿವಾರ್ಯ ಸಂದರ್ಭದಲ್ಲಿ, ಮಾದೇವಿಯೇ ಅಡುಗೆ ಊಟಗಳನ್ನು ನೀಡುತ್ತಾಳೆ. ಅಷ್ಟೇ ಅಲ್ಲ, ಪ್ರತಿ ದೀಪಾವಳಿಗೂ ಬಾಬು ಅವಳಿಗೆ ಹೊಸ ಸೀರೆಯೊಂದನ್ನು ಕೊಡಿಸುತ್ತಾನೆ. ಅಲ್ಲದೆ, ಅವಳ ಮೂರು ವರ್ಷದ ಮಗನಿಗೆಂದೇ ಪಟಾಕಿಗಳನ್ನೂ ತರುತ್ತಾನಂತೆ.

ಮಾವ ಇಷ್ಟು ಕಥೆ ಹೇಳಿ ಮುಗಿಸುವ ಹೊತ್ತಿಗೆ ನಮ್ಮ ಅತ್ತೆ ಬಂದು ಕರೆದರು ಎಂದು ಎದ್ದು ಒಳಗೆ ಹೋದೆವು. ಬಾಬು ಹಾಗೇಕೆ ಮಾಡಿದ ಎಂದು ಯೋಚಿಸುತ್ತಾ ಮಲಗಿದ ನನಗೆ ಮಾರನೆಯ ದಿನ ಅವನನ್ನು ಮಾತಾಡಿಸುವ ತವಕ ಉಂಟಾಯಿತು. ಯಾವುದೊ ಕಾರಣಕ್ಕೆ ಮನೆಗೆ ಬಂದ ಬಾಬುವನ್ನು ಅವನು ಹೊರಹೋಗುವಾಗ ಯಾರಿಗೂ ಕಾಣದಂತೆ ನಿಲ್ಲಿಸಿ ಕೇಳಿಯೇಬಿಟ್ಟೆ. ಅವನು ನಗುತ್ತ "ನೋಡಿ ಬುದ್ದಿ, ಮಾದೇವಿ ನನ್ನ ಜೊತೆ ಇದ್ದಿದ್ರೆ, ನಾವು ಮೂರೂ ಜನ ನೆಮ್ಮದಿಯಾಗಿ ಇರಾಕಾಗ್ತಿರ್ಲಿಲ್ಲ. ಅವಳನ್ನ ಮದ್ವೆಯಾಗಿದ್ದು ಅವಳನ್ನ ಸಂತೋಷವಾಗಿ ನೋಡ್ಕೋತೀನಿ ಅಂತಲ್ವಾ? ನನ್ನ ಕೈಯಲ್ಲಿ ಅದು ಆಗಲ್ಲ ಅಂತ ಅವಳ ಜೀವನ ಯಾಕೆ ಹಾಳು ಮಾಡಬೇಕು, ಹೇಳಿ? ಅದ್ಕೆ ಕರ್ಕೊಂಡು ಹೋಗಿ ಬಿಟ್ಟೆ. ಅವ್ಳಿಗೆ ಯಾವ ಉಪಕಾರಾನೂ ಮಾಡಿಲ್ಲ ನಾನು. ಅವಳ ಇಷ್ಟ ಹೇಗೋ ಅವಳು ಹಾಗೆ ಬದ್ಕೋದು ನ್ಯಾಯ. ಮಾತಾಡೋರು ಎಷ್ಟು ದಿನ ಅಂತ ಮಾತಾಡಾರು? ಕಡೇಲಿ, ನಮ್ಮ ಬದುಕು ನಾವೇ ಬಾಳ್ಬೇಕು, ಅಲ್ವಾ? ಬರ್ತೀನಿ ಬುದ್ದಿ" ಎನ್ನುತ್ತಾ ತನ್ನ ಕೆಲಸಕ್ಕೆ ಹೋದ.




No comments:

Post a Comment