Sunday, January 1, 2012

                                                                   ಶೋಧನೆ - ಸಾಧನೆ 


ಹೊಸ ವರ್ಷಕ್ಕೆ ಒಂದು ಹೊಸ ಕವಿತೆ...ವೈಯಕ್ತಿಕವಾಗಿ ನನಗೆ ಅತ್ಯಂತ ಸಂತೋಷ ನೀಡಿತು - ಈ ಕವಿತೆ. ನಿಮಗೂ ಇಷ್ಟವಾಗುವುದು ಎಂದು ಭಾವಿಸುತ್ತೇನೆ.




  ....ಹೊರಳಿ ನೋಡಿದೆ - ಕಗ್ಗತ್ತಲು...
  ಸ್ಥಿರ-ಚರಗಳಾವುವು ಇದ್ದಂತಿಲ್ಲ...
  ಕಣ್ಣು ಅರಳಿಸಿದರೂ ಕಾಣಲೊಲ್ಲದು
  - ಅಂಧಕಾರ ಕವಿದಿದೆ ಸುತ್ತಲು....


  "ಮೂರ್ಖ! ಕಣ್ಬಿಟ್ಟು ನೋಡು!"
  - ತೇಲಿಬಂತೊಂದು ಅಶರೀರವಾಣಿ.
  "ಕತ್ತಲೇ ಕವಿದಿರಲು ನಾನೇನ ನೋಡಲಿ?"
 - ಅರ್ಥಕ್ಕಾಗಿ ಹುಡುಕಿದೆ...ಯೋಚಿಸಿದೆ...


  ಶೋಧಿಸಿದೆ!!! ಕಣ್ಮುಚ್ಚಿ ಕಣ್ತೆರೆದೆ!!!
  ಎಲ್ಲೆಲ್ಲೂ ಬೆಳಕು! ಅದ್ಭುತ ಕಾಂತಿ!!
  ಎಲ್ಲವೂ ಹೊಸತಾಗಿದೆ! ಭಿನ್ನವಾಗಿದೆ!
  ಹೊಸ ಲೋಕವೇ ಎದುರಿಗಿದೆ!!


  ನೋಡಿದೆ - "ನಾನು" ಬೆತ್ತಲೆಯಾಗಿದ್ದೆ...
  ಸ್ಥಿರ ಚರಗಳೆಲ್ಲವೂ ಇದ್ದಲಿಯೇ ಇವೆ.
  ಹೊಸ ಅರ್ಥವ ಬೀರಿ ನಗುತಲಿವೆ
  ನನ್ನಿಂದಲೇ ನಾನು ಮತ್ತೆ ಜನಿಸಿದ್ದೆ!!!