Monday, October 31, 2011



                                           ಅಶ್ವಾರೋಹಿ


ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನನ್ನ ಪ್ರಪ್ರಥಮ ಕನ್ನಡ ಕವಿತೆಯನ್ನು ನನ್ನ ಈ ಬ್ಲಾಗಿನಲ್ಲಿ ರಚಿಸುತ್ತಿದ್ದೇನೆ. ಕೆಲವು ದಿನಗಳ ಹಿಂದೆಯಷ್ಟೇ ಕನ್ನಡ ಕವಿತೆ ರಚಿಸಬೇಕೆಂಬ ತುಡಿತ ಹೆಚ್ಚಿ, ಈ ಕವಿತೆಗೆ ನಾಂದಿ ಹಾಡಿತು.ಈ ನನ್ನ ರಚನೆ ನಿಮಗೆ ರುಚಿಸುವುದು ಎಂದು ಭಾವಿಸುತ್ತೇನೆ.

ಅವಳಲ್ಲಿ ಮಲಗಿಹಳು - ನಿಶ್ಚಲವಾಗಿ
ಜಡವಾದ ದೇಹ - ನಿಸ್ತೇಜ ಕಣ್ಣುಗಳು.
ಕೆಲವು ಚಣಗಳ ಹಿಂದೆ ಕನಸನ್ನು ಕಾಣುತ್ತ
ತುಂಬಿದ್ದವು ಅದಕೆ ಕೋಟಿ ಬಣ್ಣಗಳು.

ಅವಳನ್ನು ತನ್ನೆದೆಗೆ ಬಿಗಿದಪ್ಪಿ ಕುಳಿತಿಹನು
ಮಾತನಾಡಲು ಜಿಹ್ವೆ ತೊದಲುತಿಹುದು
ತನಗೆ ಲೋಕವೇ ಆದ ಅವಳು ಮೃತಲೆಂ
ದರಿತು ಅವನ ಹೃದಯವೇ ಬಿಕ್ಕಿ ಅಳುತಲಿಹುದು.

"ಸಾವನ್ನು ಪ್ರೀತಿಯಿಂ ಗೆಲ್ಲುವೆವು" ಎಂದ
ವರು ನುಡಿದಿದ್ದರೊಲುಮೆಯ ಅಮಲಿನಲ್ಲಿ!!
ಸಾವಿಲ್ಲದೊಂದು ಮನೆ ನೋವಿಲ್ಲದೊಂದು 
ಮನೆ ಎಲ್ಲಿಹುದು ಹೇಳಿ ಈ ಭೂಮಿಯಲ್ಲಿ?

ಸೂರ್ಯನ ಕಿರಣಕ್ಕೂ ಗ್ರಹಣ ಬಡಿಯದೇ ಇರದು
ಲೋಕದಲಿ ಯಾವುದೂ ಚಿರವಲ್ಲ
ಹುಟ್ಟಿದಾ ಜೀವಕ್ಕೆ ಸಾವೊಂದೇ ಖಚಿತವು 
ಅನ್ಯವಾವುದು ಇಲ್ಲಿ ಸ್ಥಿರವಲ್ಲ

ಹುಟ್ಟಿದಾ ಕ್ಷಣದಿಂದ ಸಾವೆಂಬ ಕುದುರೆಗೆ
ಮೇವುಣಿಸಿ ಜೀವ ಜತೆಗೊಯ್ಯುತಿಹುದು
ಮಾರ್ಗದಲಿ ಜೀವವು ಅಶ್ವವನು ಕಟ್ಟಿ ತಾ
ಲೋಕದಲಿ ಸಾಧನೆಯ ಗೈಯ್ಯುತಿಹುದು

"ಸಾವನ್ನು ಗೆಲ್ಲುವುದು ಸುಲಭವೂ ಅಲ್ಲ;
ಸಾವನ್ನು ಗೆದ್ದೇನು ಸಾಧಿಸುವುದಿಲ್ಲ"
ಎಂದಾರಾದರು ಅವನಿಗೊಮ್ಮೆ ಹೇಳಿ
ಇಂದಲ್ಲ ನಾಳೆ ಸಾವು ಖಚಿತವೆಂದರಿತು
ಸಾರ್ಥಕವಾಗಿ ನಿಮ್ಮ ಬದುಕನ್ನು ಬಾಳಿ

ಸಾಧನೆಯ ಗೈದಂದು ನಮ್ಮಶ್ವವನ್ನೇರಿ
ಎಲ್ಲವನ್ನೂ ತ್ಯಜಿಸಿ ಹೋಗಬೇಕು
ವ್ಯೋಮಾಗ್ನಿಜಲವಾಯುಭೂಮಿಗಳಲಿ
ದೇಹ ಕರಗಿ ಒಂದಾಗಿ ಹೋಗಬೇಕು
ಜೀವಾತ್ಮವು ನಭೋಮಂಡಲದೊಳ ಸೇರಿ
ಕೀರ್ತಿ ಬೆಳಕಲ್ಲಿ ಬೆಳಕಾಗಬೇಕು
















No comments:

Post a Comment