ಒಂದು ಮಾಮೂಲಿ ಬೆಳಗ್ಗೆ...
"ಗುರು, ಒಂದು ಕಿಂಗ್ ಕೊಡಮ್ಮ" ಎಂದು ಅವನು ಹಾಲಿನಂಗಡಿ ಮಂಜನನ್ನು ಕೇಳಿದ.
ಮಂಜ ತನ್ನ ಬೆಳಗಿನ ಗಿರಾಕಿಗಳಿಗೆ ಹಾಲು ನೀಡುತ್ತಾ ಹಣ ವಸೂಲಿ ಮಾಡುವುದರಲ್ಲಿ ಮಗ್ನನಾಗಿದ್ದ. "ಒಂದು ನಿಮಿಷ ಇರಿ ಸ್ವಾಮೀ! ಮೊದಲು ಹಾಲು ತೊಗೊಳ್ಳೋರು ತೊಗೊಳ್ಳಿ. ನಿಮ್ಮ ಕಿಂಗು ಎಲ್ಲ ಆಮೇಲೆ. ಸ್ವಲ್ಪ ತಡೀರಿ!" ಎಂದು ಮಂಜ ತನ್ನ ಕೆಲಸದ ನಡುವೆ ಉತ್ತರ ನೀಡಿದ.
" ನೀನು ಹೇಳಿದ್ದು ನನಗೆ ತಿಳಿಯತ್ತೆ. ನನ್ನ ಹೊಟ್ಟೆ ಕೇಳಬೇಕಲ್ಲ?! ನನ್ನ ಕಷ್ಟ ನಂಗೆ... ಬೇಗ ಕೊಡಯ್ಯ! ಸಲೀಸಾಗತ್ತೆ!" ಎನ್ನುತ್ತಾ ಅವನು ಮಂಜನ ಮುಖದೆಡೆಗೆ ದುಡ್ಡು ತಿವಿದ.
"ಬೆಳಗ್ಗೆ ಬೆಳಗ್ಗೆ ಎಂಥ ಹೊಲಸು ಕೆಲಸಕ್ಕೆ ಬರ್ತೀರಯ್ಯ! ತೊಗೊಂಡು ಹೋಗು ಮೊದ್ಲು" ಎಂದು ಮಂಜ ಮುಖ ಸಿಂಡರಿಸಿಕೊಂಡು ಅವನಿಗೆ ಒಂದು ಕಿಂಗ್ ಕೊಟ್ಟು ಸಾಗಿಹಾಕಿದ. ಅವನು ಖುಷಿಯಿಂದ ಅಲ್ಲಿಯೇ ಇದ್ದ ಪಬ್ಲಿಕ್ ಶೌಚಾಲಯಕ್ಕೆ ಓಡಿಹೋದ. ಹಾಲಿನಂಗಡಿಯ ಬಳಿಯಿದ್ದ ಜನರೆಲ್ಲಾ ಅವನನ್ನು ನೋಡಿ ನಗುತ್ತಾ ಹೋದರು.
ಅವನು ಅಲ್ಲಿದ್ದ ಒಂದು ಶೌಚದೊಳಗೆ ಹೋದ. "ಥೂ! ಅದ್ಯಾವೋನು ಬಂದಿದ್ನೋ ಮುಂಚೆ! ಹೊಟ್ಟೆಗೆ ಏನಾದ್ರೂ ತಿನ್ಲಿ! ಹೋದಮೇಲೆ, ನೆಟ್ಗೆ ನೀರು ಹಾಕೋ ಬುದ್ಧಿ ಬೇಡ?! ಅವ್ನ ಮನೆ ಹಾಳಾಗ!...ನಾನೋ! ಸಿಗರೇಟು ತಂದೆ. ಬೆಂಕಿ ತರೋದು ಮರೆತೆ! ನನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ!" ಎಂದು ಸ್ವನಿಂದನೆಗೆ ಅವನು ಮೊದಲುಮಾಡಿದ.
"ಓಹೋ! ನಮಸ್ಕಾರ ಸಾರ್! ಬೆಂಕಿಪೊಟ್ಟಣ ಬೇಕ?" ಎಂದು ಪಕ್ಕದ ಶೌಚದಿಂದ ಇವನು ಕೇಳಿದ.
"ಹೌದು! ಕೊಡ್ತೀರಾ? ತೀರ ಅರ್ಜೆಂಟು!" ಎಂದು ಅವನು ದೈನ್ಯದಿಂದ ಕೇಳಿದ. ಬೆಂಕಿಪೊಟ್ಟಣ ಗೋಡೆ ಹಾರಿ ಬಂತು. ಅವನಿಗೆ ಹೋದ ಜೀವ ಮರಳಿ ಬಂದಂತೆ ಅಯ್ತು.
"ಆಹಾ! ಇದು ನೋಡಿ ಸುಖ ಅಂದ್ರೆ! ತುಂಬಾ ಥ್ಯಾಂಕ್ಸ್!" ಎನ್ನುತ್ತಾ ಅವನು ಸೇದಲು ಶುರು ಮಾಡಿದ.
"ನೀವು ಎಲ್ಲಿ ಅವ್ರು ಸಾರ್? ಏನು ನಿಮ್ಮ ಕಥೆ?" ಎನ್ನುತ್ತಾ ಇವನು ಮಾತು ಶುರು ಮಾಡಿದ.
ಅವನು ತನ್ನ ಕಥೆಯನ್ನು ಶುರು ಮಾಡಿದ. "ನಂದು ಇಲ್ಲೇ ಕನಕಪುರದ ಹತ್ರ ಹೊಸಹಳ್ಳಿ. ಬೇಸಾಯದ ಕುಟುಂಬ. ಅದ್ಯಾಕೋ ಗೊತ್ತಿಲ್ಲ - ಕಳೆದ ಎರಡು ವರ್ಷಗಳಿಂದ ನನ್ನ ಭೂಮೀಲಿ ಸರೀಗೆ ಬೆಳೆ ಬರ್ತಾ ಇಲ್ಲ. ಏನೇನೋ ಮಾಡಿದ್ದಾಯ್ತು. ಮಂತ್ರ ತಂತ್ರ ಹೋಮ ಪೂಜೆ - ಎಲ್ಲವೂ. ಏನೂ ಪ್ರಯೋಜನ ಅಗ್ಲಿಲ್ಲ. ಪೂಜೆ ಮಂತ್ರದ ಹೆಸರಲ್ಲಿ ಪೂಜಾರಿ ಜೋಯ್ಸಾ - ಇವರುಗಳು ನನ್ನ ಸುಲಿಗೆ ಮಾಡಿ ದುಡ್ಡು ಮಾಡ್ಕೊಂಡ್ರು. ನನ್ನ ತಂದೆ ತಾಯಿ ಹೆಂಡತಿಗೆ ಇದರಲ್ಲಿ ನಂಬಿಕೆ ಜಾಸ್ತಿ. 'ಬೆಂಗಳೂರಿಗೆ ಹೋಗಿ ಬೇಸಾಯದ ಬಗ್ಗೆ ತಿಳ್ಕೊಂಡಿರೋರನ್ನ ಕೇಳಿ ಕೆಲಸ ಮಾಡೋಣ' ಅಂದ್ರೆ ದುಡ್ಡು ದಂಡ ಅಂತ ನನ್ನ ಮನೆ ಇಂದ ಹೊರಕ್ಕೆ ಬಿಡ್ತಾ ಇರ್ಲ್ಲಿಲ್ಲ. ನನಗೂ ರೋಸಿ ಹೋಯ್ತು. ಇವತ್ತು ಬೆಳಗ್ಗೆ ಅವರುಗಳು ಏಳೋ ಮುಂಚೇನೇ ಎದ್ದು ಮನೆಯಿಂದ ಹೊರಟೆ. ಇಲ್ಲಿಗೆ ಬಂದು ನಿಮ್ಮ ಪರಿಚಯ ಅಯ್ತು. ಇದೇ ನನ್ನ ಕಥೆ. ನಿಮ್ದೇನು ಕಥೆ?" ಎಂದು ಅವನು ತನ್ನ ಕಥೆ ಮುಗಿಸಿದ.
"ನಂದೇನು ಹೆಚ್ಚಿಲ್ಲ ಸ್ವಾಮಿ! ಇಲ್ಲೇ ಎದರುಗಡೆ ಬ್ಯಾಗ್ ಪರ್ಸು ಹೊಲಿಯೋದೆ ನನ್ನ ಕೆಲಸ. ಸುಮಾರು ಇಪ್ಪತ್ತು ವರ್ಷದ ಮುಂಚೆ ನನ್ನ ಊರಾದ ಮದುರೆ ಇಂದ ಓಡಿ ಬಂದೆ - ಅಪ್ಪನ ಜೊತೆ ಜಗಳ ಆಡಿ. ಇಲ್ಲಿಗೆ ಬಂದು ಬ್ಯಾಗ್ ಹೊಲ್ಯೋದನ್ನ ಕಲ್ತೆ. ನನ್ನ ಹೊಟ್ಟೆ ತುಂಬ್ಸೋ ಖುದಾ ಅದು. ಹೆಂಡ್ರು ಮಕ್ಳು ಇಲ್ಲ. ಬಂದಿದ್ದು ತೊಗೊಂಡು 'ಅಲ್ಲಾ ಕೊಟ್ಟಿದ್ದು' ಅಂತ ಆರಾಮಾಗಿ ಇದ್ದೀನಿ" - ಇವನು ತನ್ನ ಕಥೆ ಮುಗಿಸೋ ವೇಳೆಗೆ ಹೊರಗೆ ರೇಡಿಯೋದಲ್ಲಿ ಹಾಡು ಆರಂಭವಾಯ್ತು - "ಬದ್ತಮೀಸ್ ದಿಲ್..." ಎಂದು.
"ಲೇ! ಯಾರೋ ಅದು! ಕನ್ನಡ ಹಾಡು ಹಾಕ್ರೋ !" ಎಂದು ಅವನು ಅರಚಿದ. ಕೂಡಲೇ "ವೆಂಕಟೇಸ..."ಎಂದು ಹಾಡು ಬದಲಾಯಿತು.
"ಹೌದು .. ನಾವು ಯಾಕೆ ಹೀಗೆ ಜನ್ಮ ಜಾತಕ ಹೇಳ್ಕೊಂಡ್ವಿ? ನಂಗೂ ನಿಮಗೂ ಏನು ಸಂಬಂಧ?" - ಏನು ತೋಚದೆ ಅವನು ಕೇಳಿದ.
"ಅದೇ ಸ್ವಾಮಿ ಜೀವನ. ಯಾರಿಗೆ ಯಾವಾಗ ಯಾರು ಎಲ್ಲಿ ಯಾಕೆ ಹೇಗೆ ಸಿಗ್ತಾರೆ ಅಂತ ಗೊತ್ತಿಲ್ಲ. ಗೊತ್ತಿದ್ರೆ, ಖುದ ಅಗ್ತಿದ್ವಿ. ನಾನು ಹೇಳೋದು ಸರಿ ತಾನೇ?" - ಇವನು ತನ್ನ ಫಿಲಾಸಫಿ ಹೇಳಿದ.
"ಪರವಾಗಿಲ್ಲಯ್ಯ - ಬ್ಯಾಗ್ ಹೊಲ್ಯೋನೆ ಆದರು, ಚೆನ್ನಾಗಿ ಮಾತಾಡ್ತೀಯ" - ಅವನು ತನ್ನ ಮೆಚ್ಚುಗೆ ಸೂಚಿಸಿದ.
"ಏನೋ! ನಿಮ್ಮಂಥ ಜನ ಮಾತಾಡೋದನ್ನ ಕೇಳಿ ಕಲ್ತಿರೋದು. ಸರಿ ಸ್ವಾಮಿ! ನನ್ನ ಕೆಲಸ ಅಯ್ತು. ನಾನು ಬರ್ತೇನೆ. ಅಲ್ಲಾ ಒಳ್ಳೇದು ಮಾಡ್ಲಿ ನಿಮ್ಗೆ. ಮುಂದಿನಸಲ ಮುಖಾಮುಖಿ ಭೇಟಿ ಮಾಡೋಣ. ಸಧ್ಯಕ್ಕೆ ನಂಗೂ ಹೊಲ್ಯೋ ಕೆಲಸ ಇದೆ. ಶುಕ್ರಿಯ!" ಎನ್ನುತ್ತಾ ಇವನು ಹೊರಟು ಹೋದ.
ಅವನು ಯೋಚಿಸುತ್ತಾ ಕುಳಿತ - ತನ್ನ ಜೀವನದ ಕಥೆ ಎಲ್ಲವನ್ನು ಮುಖವೂ ನೋಡದೆ ಯಾರೋ ಒಬ್ಬನಿಗೆ ಹೇಳಿದ್ದು ಯಾಕೆ? ಆ ಇನ್ನೊಬ್ಬನೂ ಕೂಡ ಎಲ್ಲವನ್ನೂ ಹೇಳಿದ್ದು ಯಾಕೆ? ಹೆಸರನ್ನೂ ಕೇಳಲಿಲ್ಲ...
"ಸೂಪರ್ ವೆಂಕಟೇಸ...." ಹಾಡು ಕೇಳುತ್ತಲೇ ಇತ್ತು.
ನಿಜ - ಜೀವನದ ಎಲ್ಲ ಆಗು-ಹೋಗುಗಳ ಅರ್ಥ ತಿಳಿದರೆ, ಅಂದೇ ಆ ಮನುಷ್ಯ ಭಗವಂತನಾಗುತ್ತಾನೆ. ಆದರೆ, ಜೀವನದ ಸಾರವನ್ನೇ ಅದು ಕಳೆಯುತ್ತದೆ ತಾನೇ? ಯೋಚಿಸಬೇಕು...