Wednesday, December 4, 2019

ಕೌದಿ

ಊರ ಜಾತ್ರೆಗೆಂದು ರಜದ ಮೇಲೆ ಬಂದಿದ್ದ ಅವಳ ಗಂಡ, ಮಗುವಿನೊಂದಿಗೆ ಕೌದಿಯ ಮೇಲೆ - ಅವಳು ಹೊಲಿದಿದ್ದ ಕೌದಿಯ ಮೇಲೆ -  ಆಡುತ್ತಿದ್ದ. ತನ್ನ ಪುಟ್ಟ ಗೂಡು, ಪುಟ್ಟ ಸಂಸಾರವನ್ನು ಕಂಡು ಅವಳ ಮುಖದ ಮೇಲೆ ನೆಮ್ಮದಿಯ, ಅಭಿಮಾನದ ಕಿರುನಗೆ ಮೂಡಿತು. ಊರಿನಿಂದ ಬರುವಾಗ ಅವನು ತಂದಿದ್ದ ಬಟ್ಟೆಗಳನ್ನು ಸರಿಮಾಡುತ್ತಾ ಅವಳು ಕುಳಿತಿದ್ದಳು. ಈ ಬಾರಿ ಕೌದಿಗೆಂದು ಅವನು ನೀಡಿದ್ದ ಅಂಗಿಯನ್ನು ತನ್ನೆದೆಗೆ ಅವುಚಿಕೊಂಡಳು. ಆಶ್ಚರ್ಯವೆಂಬಂತೆ, ಅವಳಿಗೆ ಆ ಅಂಗಿಯಿಂದ ಇನ್ಯಾರೋ ಮುಡಿದ ಮಲ್ಲಿಗೆಯ ವಾಸನೆ ಬಡಿಯಿತು.

ಏನೂ ತೋಚದವಳಾಗಿ ಅವಳು ಅಲ್ಲೇ ಕುಳಿತಳು.....

********************

ಊರ ಜಾತ್ರೆಯ ಸಂದರ್ಭದಲ್ಲೇ, ನಾಲ್ಕು ವರ್ಷಗಳ ಹಿಂದೆ ಅವನಿಗೂ ಅವಳಿಗೂ ಪರಿಚಯವಾಗಿದ್ದು. ಅದುವರೆಗೂ ಅವರಿಗೆ ಆ ಊರಿನಲ್ಲಿ ತಮ್ಮವರು ಎಂದು ಯಾರೂ ಇರಲಿಲ್ಲ. ಇಬ್ಬರೂ ಅನಾಥರೇ. ಊರಿನ ಜನರ ನಡುವೆ ಬದುಕುತ್ತಲೇ, ಅವರು ಜೀವನವನ್ನು ಕಲಿತಿದ್ದರು. ಹಾಗೆ ಮಾಡದೆ ಬೇರೆ ಆಯ್ಕೆಯೂ ಇರಲಿಲ್ಲ. 'ಕಲಿತಿದ್ದರು' ಎನ್ನುವುದಕ್ಕಿಂತ ಬದುಕೇ ಕಲಿಸಿತ್ತು ಅಂದರೆ ಹೆಚ್ಚು ಸೂಕ್ತ. ಜಾತ್ರೆಯ ನಂತರ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಮದುವೆಗಳಲ್ಲಿ ಅವರದ್ದೂ ಒಂದಾಗಿತ್ತು, ಆ ವರ್ಷ. ಅಂತೂ, ಒಂಟಿಯಾಗಿದ್ದವರು ಜಂಟಿಯಾಗಿ ತಮ್ಮ ಪುಟ್ಟ ಗೂಡನ್ನು ಪ್ರವೇಶಿಸಿದ್ದರು. 

ಇಷ್ಟು ವರ್ಷ ಒಬ್ಬಂಟಿಗಳಾಗಿ ಹೇಗೋ ಬದುಕು ಸಾಗಿತ್ತು. ಆದರೆ, ಈಗ, ಅವನಿಗೂ ಹೆಂಡತಿಯಿದ್ದಳು. ತಮ್ಮದೇ ಆದ ಮನೆಯಿತ್ತು. ಜವಾಬುದಾರಿಗಳಿದ್ದವು. ಊರಲ್ಲಿ ದೊರೆಯುತ್ತಿದ್ದ ಸಂಬಳ ಅವರ ಇಂದಿಗೆ ಆಗುತ್ತಿತ್ತೇ ಹೊರತು ನಾಳಿನ ಕನಸುಗಳಿಗಲ್ಲ. ಹಾಗೆಂದು, ಕನಸು ಕಾಣುವುದನ್ನು ನಿಲ್ಲಿಸಲಾದೀತೇ? ಹುಟ್ಟಂದಿನಿಂದ ಅವರಿಬ್ಬರಿಗೆ ತಿಳಿದಿದ್ದಾದರೂ ಅದೊಂದೇ ಅಲ್ಲವೇ - ಕನಸು ಹೆಣೆಯುವುದು? ಕೆಲವು ತಿಂಗಳುಗಳ ಕಾಲ ಹೊಸ ಸಂಸಾರದಲ್ಲಿ ಖುಷಿಪಟ್ಟು ಅವನು ಪಟ್ಟಣಕ್ಕೆ  ಕೆಲಸಕ್ಕಾಗಿ ಹೊರಟ. ಎರಡು ಮೂರು ವಾರಗಳಿಗೊಮ್ಮೆ ಬಂದು, ಇದ್ದು, ಹೋಗುತ್ತಿದ್ದ. 

ಆವಳಾದರೂ ಊರಿನಲ್ಲಿ ಒಬ್ಬಳೇ ಏನು ಮಾಡಬೇಕು? ಮೂರು-ನಾಲ್ಕು ದಿನಗಳಿಗೊಮ್ಮೆ ಅವನಿಗೆ ಪತ್ರ ಬರೆಯುತ್ತಿದ್ದಳು. ಅವನೂ ಉತ್ತರಿಸುತ್ತಿದ್ದ. ಅವರ ಪತ್ರಗಳು ವ್ಯಾಕರಣಬದ್ಧವಾಗಿದ್ದವೋ ಇಲ್ಲವೋ ಗೊತ್ತಿಲ್ಲ. ಪರಿಶುದ್ಧವಾಗಿದ್ದವು. ಪದಗಳಲ್ಲೇ ಪರಸ್ಪರರನ್ನು ಮುದ್ದಿಸುತ್ತಿದ್ದರು. ಆದರೂ, ಪತ್ರ ಬರೆಯುವುದರಲ್ಲೇ ದಿನಗಳನ್ನು ತಳ್ಳಲಾದೀತೇ? ಆಗ ಅವಳು ಅವರಿಬ್ಬರಿಗಾಗಿ ಕೌದಿಯೊಂದನ್ನು ತಯಾರಿಸುವ ನಿರ್ಧಾರಕ್ಕೆ ಬಂದದ್ದು. 

ಕೌದಿ ಹೊಲಿಯುವುದು ಸಾಮಾನ್ಯದ ಕೆಲಸವಲ್ಲ. ಅದರಲ್ಲೂ ಅವಳಿಗೆ ಎಲ್ಲಿಂದಲೋ ತಂದ ಚಿಂದಿ ಬಟ್ಟೆಗಳನ್ನು ಸೇರಿಸಿ ಮಾಡುವ ಕೌದಿ ಬೇಕಿರಲಿಲ್ಲ. ಅವಳ, ಅವನ ಬಟ್ಟೆಗಳನ್ನು ಒಟ್ಟಿಗೆ ಸೇರಿಸಿ ಮಾಡಿದ ಕೌದಿಯೇ ಆಗಬೇಕಿತ್ತು. ಅದು ಅವಳಿಗೆ ಕೇವಲ ಬಟ್ಟೆಯ ತುಂಡುಗಳಾಗಿರಲಿಲ್ಲ. ಅವರ ಸಂತೋಷ, ಸಿಡುಕು, ನೆನಪು, ಕನಸುಗಳೆಲ್ಲವನ್ನು ಹೊತ್ತ ಬೆಚ್ಚನೆಯ ಹೊದಿಕೆಯಾಗಿತ್ತು. ಜೀವನದಲ್ಲಿ ಅದುವರೆಗೂ 'ನಮ್ಮದು' ಎಂದು ಹೇಳಿಕೊಳ್ಳುವಂತಹ ಯಾವುದೇ ವಸ್ತು ಅವರಲ್ಲಿರಲಿಲ್ಲ. ಈ ಕೌದಿ ಆ ಕೊರತೆಯನ್ನು ನೀಗಿಸುವದಕ್ಕಾಗಿ ಎಂದು ಅವಳು ನಿಶ್ಚಯಿಸಿದ್ದಳು. 

ಅವರ ಹೊಸಸಂಸಾರದ ಹೊಸ ಕೌದಿಗೆ ಅವಳು ಅವರಿಬ್ಬರೂ ತಮ್ಮ ಮೊದಲ ಭೇಟಿಯ ದಿನದಂದು ಧರಿಸಿದ್ದ ಸೀರೆ, ಪಂಚೆಗಳನ್ನು ಹೊರತೆಗೆದಳು. ಅವುಗಳ ಸ್ಪರ್ಶದಲ್ಲಿ, ವಾಸನೆಯಲ್ಲಿ ಆ ದಿನದ ನೆನಪುಗಳು ಇನ್ನೂ ಹಸಿಹಸಿಯಾಗಿದ್ದದ್ದು ಅವಳಿಗೆ ಅರಿವಾಗಿತ್ತು.... 

ಹಾಗೆ ನೋಡಿದರೆ, ಅಂದು ಅವರಿಬ್ಬರು ಭೇಟಿಯಾಗಲೇ ಬೇಕಾಗುವಂತಹ ಸಂದರ್ಭವೇನು ಇರಲಿಲ್ಲ. ಊರ ಜಾತ್ರೆಯಲ್ಲಿ ಕೆಲಸ ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಇವರೂ ಅದರಂತೆ ತಮ್ಮ ಕೈಲಾದ ಸೇವೆ ಮಾಡಲು ಬಂದಿದ್ದರು. ಅವನು ಪೂಜೆಯ ಸಾಮಾನುಗಳು, ಸಂತರ್ಪಣೆಯ ದಿನಸಿಗಳಿರುವ ಮೂಟೆಗಳನ್ನು ಹೊತ್ತು ಸಾಗಿಸುತ್ತಿದ್ದರೆ, ಅವಳು ಹೋಗಿ ಬರುವ ಭಕ್ತರಿಗೆ ಪ್ರಸಾದ, ಪಾನಕ ಹಂಚುವ ಕೆಲಸದಲ್ಲಿದ್ದಳು. ಮೂಟೆಗಳನ್ನಿಳಿಸಿ ಪ್ರಸಾದಕ್ಕೆಂದು ಅವನು ಬಂದಾಗ, ಅವರಿಬ್ಬರು ಒಬ್ಬರನ್ನೊಬ್ಬರು ಕಂಡಿದ್ದರು. ಅಷ್ಟು ವರ್ಷ ಅದೇ ಊರಲ್ಲಿದ್ದು ಅದು ಹೇಗೆ ನೋಡಿರಲಿಲ್ಲವೋ ಯಾರಿಗೂ ಗೊತ್ತಿಲ್ಲ. ಅಥವಾ ನೋಡಿದ್ದರೂ, ಅಷ್ಟು ಗಮನ ನೀಡದೇ ಇದ್ದಿರಬಹುದು - ಅವಳೇನೂ ಹೇಳಿಕೊಳ್ಳುವಂಥ ಸುಂದರಿಯಲ್ಲ. ಅವನೂ ಅಷ್ಟೇ. ಅಂದಿನ ಬಟ್ಟೆಯಲ್ಲೇ ಏನಾದರೂ ವಿಶೇಷವಿದ್ದಿರಬಹುದು ಎನ್ನಲು, ಅವರು ತೊಟ್ಟಿದ್ದ ಬಟ್ಟೆ ಸಹ ಅವರಾಗಿ ಕೊಂಡದಲ್ಲ, ತಮ್ಮವರು ಕೊಡಿಸಿದ್ದಲ್ಲ. ದಾನವಾಗಿ ಬಂದದ್ದು - ಅವರ ಹೆಸರುಗಳಂತೆ. ಅವನಿಗೆ ಅವಳು ಯಾವ ಕಾರಣಕ್ಕೋ ಹಿಡಿಸಿದ್ದಳು. ಅವಳಿಗೂ ಅಷ್ಟೇ. ಹೇಳಲು ಕೇಳಲು ಹಿರಿಯರು ಎಂದು ಯಾರೂ ಇರಲಿಲ್ಲ. ಕಣ್ಣು ಮುಚ್ಚಿ ತೆರೆಯುವುದರಲ್ಲಿ, ಸರಳವಾಗಿ ಅವರ ಮದುವೆಯೇ ನಡೆದುಹೋಗಿತ್ತು. ಪುಣ್ಯ ಲಭಿಸಿತ್ತೋ ಇಲ್ಲವೋ. ಒಬ್ಬರಿಗೊಬ್ಬರು ದಕ್ಕಿದ್ದರು....

'ಮುಂದೆ ಹುಟ್ಟುವ ನಮ್ಮ ಮಕ್ಕಳಿಗೆ ಈ ಕಥೆಯನ್ನು ಹೇಳಿದರೆ, ಅವರಾದರೂ ನಂಬುತ್ತಾರೆಯೇ?' ಎಂದು ನೆನೆಯುತ್ತಾ ಅವಳು ನಕ್ಕಿದ್ದಳು. ಅವರಿಬ್ಬರಿಗೇ ನಂಬಲು ಸಾಧ್ಯವಾಗಿರಲಿಲ್ಲ ಎಷ್ಟೋ ದಿನ! ಹಸಿರು ಬಣ್ಣದ ಮೇಲೆ ಬಿಳಿಯ ಹೂವುಗಳ ಚಿತ್ರವಿದ್ದ ಅವಳ ಸೀರೆಗೆ, ಅವನ ಬಿಳಿಯ ಪಂಚೆಯ ತುಂಡನ್ನು ಸೇರಿಸಿ ಹೊಲೆಯಲಾರಂಭಿಸಿದ್ದಳು. ಅವನಿಗೆ ಬರೆದ ಮುಂದಿನ ಪತ್ರದಲ್ಲಿ, ಅವರ ಈ ಕೌದಿಯ ವಿಚಾರವನ್ನು ತಿಳಿಸಿದ್ದಳು. 

ಮುಂದಿನ ಬಾರಿ ಅವನು ಊರಿಗೆ ಬರುವ ವೇಳೆಗೆ, ಕೌದಿ ತಕ್ಕಷ್ಟು ದೊಡ್ಡದಾಗಿತ್ತು. ಅವನು ಬರಲೆಂದೇ ಅವಳು ಆ ಕೌದಿಯನ್ನು ಒಮ್ಮೆಯೂ ಬಳಸದೆ ಕಾಯುತ್ತಿದ್ದಳು. ಸ್ವಲ್ಪ ಇಕ್ಕಟ್ಟಾದರೂ, ಅವರಿಬ್ಬರೂ ಮಲಗುವಷ್ಟು ಜಾಗವಿತ್ತು ಅದರಲ್ಲಿ. ಆ ರಾತ್ರಿ, ಅವರು ಊರಿನ ಗದ್ದೆಯೊಂದರಲ್ಲಿ ಬೆಳದಿಂಗಳ ಊಟಕ್ಕಾಗಿ ಹೋದರು. ಕೌದಿಯ ಮೇಲೆಯೇ ಅವರ ಊಟ. ಬೆಳದಿಂಗಳನ್ನು ಸವಿಯುತ್ತಾ ಅಲ್ಲಿಯೇ ರಾತ್ರಿಯನ್ನು ಕಳೆದರು. ಆ ರಾತ್ರಿ, ಅವರ ಪಿಸುಮಾತುಗಳಿಗೆ, ಹೆಣೆದ ಕನಸುಗಳಿಗೆ ಸಾಕ್ಷಿಯಾಗಿದ್ದು ಆ ಕೌದಿ ಹಾಗು ಮೇಲಿದ್ದ ಹುಣ್ಣಿಮೆ ಚಂದ್ರ ಮಾತ್ರ. ಅವರ ಮೈಯ ವಾಸನೆ, ಬೆವರ ಹನಿಗಳೊಂದಿಗೆ ಅವೆಲ್ಲವೂ ಬೆರೆತು ಕೌದಿಯನ್ನು ಸೇರಿತ್ತು. ಕೌದಿಯ ಸ್ಪರ್ಶವಾದಾಗಲೆಲ್ಲ ಅವಳು ಆ ರಾತ್ರಿಯನ್ನು ನೆನೆದು ಪುಳಕಗೊಳ್ಳುತ್ತಿದ್ದಳು. 

ಮಾರನೆಯ ದಿನ, ಕೌದಿಯನ್ನು ಮೊದಲ ಬಾರಿ ಒಗೆದು, ಅವರ ಮನೆಯ ಮುಂದೆ ಒಣಗಲು ಹರವಿದ್ದಳು. ಊರಿನ ಜನರೆಲ್ಲಾ ಅದನ್ನು ಕಂಡು ಅವಳನ್ನು ಹೊಗಳುವವರೇ. ಅವಳ ಬಟ್ಟೆಯ ತುಂಡುಗಳಿಗೂ ಅವನ ಬಟ್ಟೆಯ ತುಂಡುಗಳಿಗೂ ಅಂತರ ಗೊತ್ತಾಗದ ರೀತಿಯಲ್ಲಿ, ಹೊರಗೆ ಕಾಣದ ರೀತಿಯಲ್ಲಿ ಅದೆಷ್ಟು ಚೆನ್ನಾಗಿ ಹೊಲಿಗೆ ಹಾಕಿದ್ದಳು! ಚಿಂದಿ ಬಟ್ಟೆಗಳಾದರೂ, ಬಣ್ಣಗಳು ಅದೆಷ್ಟು ಚೆನ್ನಾಗಿ ಹೊಂದುತ್ತಿದ್ದವು! ತಂದೆ-ತಾಯಿಯಿಲ್ಲದ ಅವಳಿಗೆ ಇಷ್ಟು ನಯನಾಜೂಕುಗಳನ್ನು ಯಾರು ಕಲಿಸಿದರೋ! ನೆರೆಹೊರೆಯವರ ಮಾತು ಕೇಳಿ ಅವನು ಉಬ್ಬಿಹೋದ. ಅವಳ ಬಗ್ಗೆ ಹೆಮ್ಮೆಯಿಂದ ಬೀಗಿದ್ದ. ಊರಿನವರ ಕಣ್ಣು ಬೀಳಬಾರದು ಎಂದು ಅವನೇ ಸ್ವತಃ ಅವಳಿಗೆ ದೃಷ್ಟಿ ನೀವಾಳಿಸಿದ್ದ. 

ಕೆಲವು ವಾರಗಳ ನಂತರ, ಅವನಿಗೆ ಬರೆದ ಪತ್ರದಲ್ಲಿ ಅವಳು ತಿಳಿಸಿದ್ದಳು - ಅವರ ಆ ಕೌದಿಯಲ್ಲಿ ಆಡಲು ಹೊಸಬನೊಬ್ಬ  ಕುಟುಂಬಕ್ಕೆ ಬರುತ್ತಾನೆಂದು. ಸುದ್ದಿ ತಿಳಿದ ಅವನು ಕೂಡಲೇ ಊರಿಗೆ ಬಂದು, ಇಬ್ಬರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿ ಬಂದಿದ್ದರು. ಅವರಿಬ್ಬರ ಸೀರೆ - ಅಂಗಿಗಳ ಜೊತೆಗೆ, ಇನ್ನು ಕೆಲವೇ ತಿಂಗಳುಗಳಲ್ಲಿ ಪುಟ್ಟ ಅಂಗಿಯೋ ಲಂಗವೋ ಆ ಕೌದಿಗೆ ಸೇರುತ್ತದಲ್ಲ! ಇನ್ನು ಮುಂದೆ, ಕೌದಿಯನ್ನು ಹಿರಿದಾಗಿಸುವ ಜೊತೆಗೆ, ಬೆಚ್ಚಗಾಗಿಸುವ ರೀತಿಯಲ್ಲಿ ಹೊಲೆಯಲು ಅವಳಿಗೆ ತಿಳಿಸಿದ್ದ. ಅವಳಾಗಲೇ ಕೌದಿಗೆ ತನ್ನ ಪ್ರೀತಿ, ಕನಸುಗಳ ಕಾವನ್ನು ಹೇಗೆ ಹೆಣೆಯಬೇಕು ಎಂಬ ಯೋಚನೆಯಲ್ಲಿದ್ದಳು. 

ಅವನು ಪಟ್ಟಣಕ್ಕೆ ಹೋದ ನಂತರ ಒಂದು ಮಧ್ಯಾಹ್ನ, ಹೊಲಿಗೆ ಹಾಕುವಾಗ ಅವಳೊಂದು ಕನಸು ಕಂಡಿದ್ದಳು....  
ಅವರ ಪುಟ್ಟ ಗೂಡು ಸ್ವಲ್ಪ ಹಿರಿದಾಗಿತ್ತು. ಈಗ ಅವರಿಗೆ ಹುಟ್ಟುವ ಮಗುವಿನ ಜೊತೆ ಇನ್ನೆರಡು ಮಕ್ಕಳು. ಅವರು ದೊಡ್ಡವರಾಗುವ ವೇಳೆಗೆ, ಅವಳು ಹೊಲೆಯುತ್ತಿದ್ದ ಕೌದಿಯೂ ಹಿರಿದಾಗಿತ್ತು. ಅವರ ಮದುವೆಯ ನಂತರ, ಆ ಕೌದಿಯನ್ನು ನಾಲ್ಕು ಭಾಗವಾಗಿ ಮಾಡಿ, ಮೂರನ್ನು ಮಕ್ಕಳಿಗೆ ನೀಡಿ, ಒಂದನ್ನು ಆವರಿಬ್ಬರು ಇಟ್ಟುಕೊಂಡಿದ್ದರು. ಅವರಿಬ್ಬರು ಇಟ್ಟುಕೊಂಡ ಭಾಗದಲ್ಲಿ ನೆನ್ನೆಯ ಸವಿಯಾದ ನೆನಪುಗಳ ಜೊತೆ,  ನಾಳೆಯ ನೆಮ್ಮದಿಯ ಕನಸುಗಳನ್ನು ಹೆಣೆದಿತ್ತು. 

ತಮಗೆ ನೀಡಿದ ಭಾಗಗಳಿಗೆ ಅವರ ಮಕ್ಕಳು, ಹೆಂಡತಿಯರು ತಮ್ಮ ಬಟ್ಟೆಗಳನ್ನು ಸೇರಿಸಿ ಆ ಕೌದಿಯನ್ನು ಮುಂದುವರೆಸಿದ್ದರು. ಆ ಹೊಸ ಕೌದಿಯಲ್ಲಿ ಮೊಮ್ಮಕ್ಕಳು ಆಡಿದಾಗ ಅವಳಿಗೆ ತನ್ನ ಮೈಮೇಲೆಯೇ ಅವುಗಳು ಆಡಿದಂತೆ ಭಾಸವಾಗುತ್ತಿತ್ತು. ಮೊಮ್ಮಕ್ಕಳಿಗೆ ಮದುವೆಯಾದಾಗ, ಅವುಗಳ ತಂದೆ ತಾಯಿಯರೂ ಕೌದಿಯನ್ನು ಭಾಗ ಮಾಡಿ ಹಂಚಿದ್ದರು. ಮತ್ತೆ ಕೌದಿ ಬೆಳೆದು, ಮರಿಮಕ್ಕಳು ಆಡಿದರು...ಮುಂದಿನ ಎಷ್ಟೋ ಪೀಳಿಗೆಗಳವರೆಗೂ, ಅವರಿಗೆ ಈ ಕೌದಿಯನ್ನು ಮೊದಲು ಮಾಡಿದವರು ಯಾರು ಎನ್ನುವ ನೆನಪಿರುತ್ತಿತ್ತು. ಇವರ ಅನುಭವದ, ಜೀವನದ ವಾಸನೆ, ಕಲಿತ ಪಾಠಗಳು, ಆಡಿದ ಜಗಳಗಳು, ನಕ್ಕ ನಗುಗಳು..... ಎಲ್ಲವೂ ಜೀವಂತವಾಗಿ, ಇನ್ನೂ ಹೊಸದಾಗಿ ಪ್ರವಹಿಸುತ್ತಲೇ ಇದ್ದವು.....ಹೊಟ್ಟೆಯಲ್ಲಿದ್ದ ಮಗು ಒದ್ದಂತಾಗಿ, ಅವಳು ಕನಸಿನಿಂದ ಎದ್ದಿದ್ದಳು. 

ಅಂತೂ, ಮಗು ಹುಟ್ಟಿತ್ತು. ಅವರಿಬ್ಬರಿಗೂ ಸಂಭ್ರಮವೋ ಸಂಭ್ರಮ - ತಮ್ಮದು ಎನ್ನುವ ಒಂದು ಜೀವವಿದೆಯಲ್ಲ ಎಂದು. ಅಷ್ಟು ದಿನ ಬರಿದಾಗಿದ್ದ ಅವರ ಮನೆ, ಅವರ ಕೌದಿ ಈಗ ಮಗುವಿನ ಆಟಿಕೆಗಳಿಂದ ತುಂಬಿತ್ತು. ಎರಡು ಮೂರು ವಾರಗಳಿಗೆ ಊರಿಗೆ ಬರುತ್ತಿದ್ದ ಅವನು, ಈಗ ಪ್ರತಿ ವಾರವೂ ಬರುತ್ತಿದ್ದ. ಪ್ರತಿ ಬಾರಿಯೂ ಹೊಸ ಬಟ್ಟೆಗಳು, ವಸ್ತುಗಳು. ಪ್ರತಿ ಬಾರಿಯೂ ಹೊಸತೆಂಬಂತೆ ಅವನ ಅವಳ ನಡುವಿನ ಹುಸಿಮುನಿಸು, ಜಗಳಗಳು: ಮಗು ನೋಡಲು ಅವನಂತೆಯೋ ಅವಳಂತೆಯೋ ಎಂದು. ಅವನಿಗೆ ಆತಂಕವಿತ್ತು: ಮಗು ಹುಟ್ಟಿದ ನಂತರ, ತನ್ನನ್ನು ಎಲ್ಲಿ ಅವಳು ಕಡೆಗಳಿಸುವಳೋ ಎಂದು. ಸಧ್ಯ, ಆ ರೀತಿ  ಏನೂ ಆಗಿರಲಿಲ್ಲ. 

ಮೊದಮೊದಲು ಅವಳ ಬಿಡುವಿನ ಸಮಯವೆಲ್ಲ ಮಗುವಿನ ಆಟಗಳನ್ನು ನೋಡುವುದರಲ್ಲಿ ಕಳೆದರೆ, ಈಗ ಅವಳಿಗೆ ಬಿಡುವೇ ಸಿಗದಷ್ಟು ಆಟ, ಚೇಷ್ಟೆಗಳನ್ನು ಮಾಡುವ ಹಂತಕ್ಕೆ ಮಗು ಬಂದಿತ್ತು. ಇದರ ನಡುವೆ, ಅವನಿಗೆ ಕಾಗದ ಬರೆಯುವ ಸಮಯವೂ ಅವಳಿಗೆ ಕೆಲವೊಮ್ಮೆ ಸಿಗುತ್ತಿರಲಿಲ್ಲ.  ಪ್ರತಿ ವಾರ ಬರುತ್ತಿದ ಗಂಡ ಈಗ ತಿಂಗಳಿಗೊಮ್ಮೆ ಬರಲು ಶುರು ಮಾಡಿದಾಗಲೂ ಅವಳು ಹೆಚ್ಚು ಯೋಚಿಸಲಿಲ್ಲ. ಅವನು ಊರಿಗೆ ಬಂದಾಗಲೂ, ಅವನ ಯೋಗಕ್ಷೇಮಕ್ಕಿಂತ, ಮಗುವಿನ ಆಟ ಪಾಠಗಳನ್ನು ಬಣ್ಣಿಸುವುದರಲ್ಲೇ ಅವಳು ಕಾಲ ಕಳೆಯುತ್ತಿದ್ದಳು. ಅವನೂ ಸಹ ಅವಳ ಉತ್ಸಾಹಕ್ಕೆ ಭಂಗ ತರದೇ ಎಲ್ಲವನ್ನೂ ಕೇಳುತ್ತಿದ್ದ. ತಿಂಗಳಿಗಾಗುವಷ್ಟು ದುಡ್ಡು ಅವಳಿಗೆ ನೀಡಿ, ಪಟ್ಟಣಕ್ಕೆ ಮರಳುತ್ತಿದ್ದ. 

ಮಗು ಕೌದಿಯ ಮೇಲೇ ಆಡಿ ಮಲಗುತ್ತಿದ್ದರಿಂದ, ನಿತ್ಯವೂ ಅದರ ಉಚ್ಚೆ, ಮಲಗಳನ್ನು ತೊಳೆದು, ಕೌದಿಯನ್ನು ಬಿಸಿಲಲ್ಲಿ ಅವಳು ಒಣಗಿಸುತ್ತಿದ್ದಳು. ಊರಿನವರಿಗೆ, ಅವಳ ಚೆಂದದ ಕೌದಿ ಬಣ್ಣ ಮಾಸಲು ಶುರುವಾಗುತ್ತಿದ್ದದ್ದು ಅರಿವಾಯಿತು. ಮಗುವಿನ ಪುಟ್ಟ ಬಟ್ಟೆಗಳು ಈಗ ಅವರ ಕೌದಿಯ ಭಾಗವಾಗಿದ್ದ ಕಾರಣ, ದೊಡ್ಡ ಬಟ್ಟೆಗಳು ಹಾಗು ಚಿಕ್ಕ ಬಟ್ಟೆಗಳ ನಡುವಿನ ಹೊಲಿಗೆಗಳು ಈಗ ಹೊರಕ್ಕೆ ಕಂಡುಬರುತ್ತಿದ್ದವು. ಎಂಥ ಒಳ್ಳೆಯ ಕೌದಿಯಾಗಿತ್ತು; ಹೀಗಾಯಿತಲ್ಲಾ ಎಂದು ಕೆಲವರು ಮರುಕಪಟ್ಟರೆ, ಅವರಲ್ಲಿ ಕೆಲವರಿಗೆ ಇದನ್ನು ಕಂಡು ಸಂತೋಷವೂ ಆಯಿತು. ಆದರೆ, ಇದಾವುದೂ ಅವಳ ಗಮನಕ್ಕೆ ಬರಲಿಲ್ಲ. ಅವಳ ಧ್ಯಾನವೆಲ್ಲ ಬೆಳೆಯುತ್ತಿದ್ದ ಅವಳ ಮಗುವಿನ ಮೇಲೆಯೇ ಇತ್ತು. 

                                                            ********************

ಮೂಗಿಗೆ ಬಡಿಯುತ್ತಿದ್ದ ಮಲ್ಲಿಗೆ ಹೂವಿನ ವಾಸನೆ ಅವಳನ್ನು ಎಚ್ಚರಿಸಿತು. ಸ್ವಲ್ಪ ಹೊತ್ತು ಏನೂ ತೋಚದವಳಾಗಿ, ಗಂಡ-ಮಗುವನ್ನು ನೋಡುತ್ತಾ ಕುಳಿತ ಅವಳು, ನಂತರ ಯಾರಿಗೂ ಕಾಣದಂತೆ ಮನೆಯ ಹಿತ್ತಲಿಗೆ ಹೋಗಿ, ಮಲ್ಲಿಗೆ ಹೂವಿನ ವಾಸನೆಯಿದ್ದ ಆ ಅಂಗಿಯನ್ನು ಹೂತು ಬಂದಳು. 

ಆ ರಾತ್ರಿ, ಅವಳಿಗೆ ಊಟವೂ ಸೇರಲಿಲ್ಲ. ಅವನು ಯಾಕೆಂದು ಕೇಳಿದಾಗ ಹಾರಿಕೆಯ ಉತ್ತರ ನೀಡಿದಳು; ಅವನೂ ಹೆಚ್ಚು ಒತ್ತಾಯ ಮಾಡಲಿಲ್ಲ. ಅವಳ ಮನಸಿನಲ್ಲಿ ನಡೆಯುತ್ತಿದ್ದ ಸಂಘರ್ಷಗಳು ಅವನಿಗೆ ಅರಿವಾದಂತಿರಲಿಲ್ಲ. ಮಾರನೆಯ ದಿನವೇ ಜಾತ್ರೆಯಾಗಿದ್ದರಿಂದ, ಬೆಳಗ್ಗೆ ಬೇಗ ಏಳಬೇಕೆಂದು, ಮಗುವನ್ನು ನಡುವೆ ಮಲಗಿಸಿ ಇಬ್ಬರೂ ಅಡ್ಡಗಾದರು. ಸ್ವಲ್ಪವೇ ಹೊತ್ತಿನಲ್ಲಿ ಅವನ ಗೊರಕೆಯೂ ಆರಂಭವಾಯಿತು. ಅಂದಿನವರೆಗೂ ಅವನ ಗೊರಕೆಯೂ ಅವಳಿಗೆ ಚೆಂದವಾಗಿ ಕೇಳುತ್ತಿತ್ತು. ಆದರೆ, ಈ ರಾತ್ರಿ ಅಸಹ್ಯವಾಯಿತು. 

ಅವನ ಗೊರಕೆಯಿಲ್ಲದಿದ್ದರೂ ಅವಳಿಗೆ ಆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಮಗು ನಿದ್ದೆಗೆ ಜಾರಿದ ಮೇಲು ಎಷ್ಟೋ ಹೊತ್ತು ತಟ್ಟುತ್ತಲೇ ಇದ್ದಳು. ತನ್ನ ಮುಂದಿನ ದಾರಿ ಏನು? ತನ್ನ ಬಳಿಯಿರುವ ಆಯ್ಕೆಗಳಾದರೂ ಏನು? ಇಷ್ಟಕ್ಕೂ, ತಾನು ಭಾವಿಸಿರುವುದು ನಿಜವೇ? ಎಂಬ ಪ್ರಶ್ನೆಯೂ ಕಾಡಿತು. ಆದರೆ, ಒಡೆದ ಚೂರುಗಳೆಲ್ಲ ಒಟ್ಟಿಗೆ ಸೇರುವಂತೆ, ಅವನು ತಿಂಗಳಿಗೊಮ್ಮೆ ಬರಲು ಶುರು ಮಾಡಿದ್ದು, ಅವಳು ಹೆಚ್ಚು ಗಮನ ಕೊಡದಿದ್ದರೂ ಏನು ಆಗದವನಂತೆ ಸುಮ್ಮನಿದ್ದದ್ದು, ಅವಳ ಮನಸ್ಸಿನ ಜಾಡನ್ನು ಮುಖನೋಡಿಯೇ ಕಂಡುಹಿಡಿಯುತ್ತಿದ ಅವನು ಇಂದು ಏನೂ ಅರಿಯದವನಾಗಿ ಮಲಗಿರುವುದು, ಆ ಮಲ್ಲಿಗೆಯ ವಾಸನೆ - ಇವುಗಳೆಲ್ಲ ಅವಳ ಅನುಮಾನವನ್ನೇ ಪೋಷಿಸಿದವು. 

ಇದೇ ಯೋಚನೆಯಲ್ಲಿ ಮುಳುಗಿದ್ದ ಅವಳಿಗೆ ನಿದ್ದೆ ಹತ್ತಿದ್ದೂ ಅರಿವಾಗಲಿಲ್ಲ. ಅವಳು ಅಂಗಿಯನ್ನು ಹೂತಿದ್ದ ಜಾಗದಲ್ಲೇ ಒಂದು ಮಲ್ಲಿಗೆಯ ಗಿಡ ಸೊಂಪಾಗಿ ಬೆಳೆದಿತ್ತು. ತನ್ನ ಜಡೆಗೆ ಆಗುವುದೆಂದು ಆ ಹೂವುಗಳನ್ನು ಬಿಡಿಸಲು ಅವಳು ಹೋದಾಗ, ಹಾವೊಂದು ಬುಸುಗುಡುವಂತೆ ಭಾಸವಾಯಿತು. ಹಾವನ್ನು ಎದುರಿಸಲು ಅವಳು ಕೌದಿಯನ್ನು ಅದರ ಮೇಲೆ ಎಸೆದರೆ, ಆ ನಾಗರ ಹಲ್ಲುಗಳು ಕೌದಿಯನ್ನೇ ಹರಿದು, ಮತ್ತೆ ಹಾವು ಅವಳ ಹಿಂದೆ ಹರಿದು ಬಂತು. ತಪ್ಪಿಸಿಕೊಂಡು ಓಡುತ್ತಿದ್ದ ಅವಳು ಹಿಂದಿರುಗಿ ನೋಡಿದರೆ, ಅವನು ಸಹಾಯಕ್ಕೆ ಬಾರದೆ, ಮಗುವನ್ನೂ ಎತ್ತಿಕೊಂಡು, ನಗುತ್ತಾ ನಿಂತಿದ್ದ....ನಿದ್ದೆಯಲ್ಲಿ ಮಗು ಹೊರಳಾಡಿದಾಗ, ಅದರ ಕಾಲು ತಾಗಿ, ಅವಳಿಗೆ ಎಚ್ಚರವಾಯಿತು. 

ಜಾತ್ರೆಗೆ ಹೋದಾಗಲೂ, ಅಷ್ಟು ಜನರ ನಡುವೆಯೂ, ಅವಳು ತನ್ನದೇ ಲೋಕದಲ್ಲಿ, ತನ್ನ ಮುಂದಿದ್ದ ಆಯ್ಕೆಗಳ ನಡುವಿನ ಹಗ್ಗಜಗ್ಗಾಟದಲ್ಲಿ ನಿರತಳಾಗಿದ್ದಳು. ಏನೂ ಮಾಡದೇ ಸುಮ್ಮನೆ ಇರುವುದು ಅವಳಿಗೆ ಸಾಧ್ಯವಿರಲಿಲ್ಲ - ಮುಂದೊಂದು ದಿನ, ಹೇಳದೇ ಕೇಳದೇ, ಆ ಮತ್ತೊಬ್ಬಳನ್ನು ಇಲ್ಲಿಗೇ ಕರೆತಂದು, ತನ್ನನ್ನು ಹೊರಹಾಕಿದರೆ?   'ನಾನು ಮಗುವಿಗೆ ಹೆಚ್ಚು ಗಮನ ನೀಡಿದ್ದೇ ತಪ್ಪೇ? ಆದರೆ, ಮಗು ನಮ್ಮಿಬರದೂ ಅಲ್ಲವೇ? ಅಷ್ಟಾಗಿಯೂ, ಅವನಿಗೆ ಹಾಗೆ ಅನಿಸಿದ್ದರೆ, ನನಗೇ ಹೇಳಬಹುದಿತ್ತು. ಈಗೇನು ಮಾಡಲಿ?' ಹಣ್ಣು ಕಾಯಿ ಮಾಡಿಸಲು ಅವರು ತಂದಿದ್ದ ಸಾಮಾನುಗಳನ್ನು ಅವನಿಗೆ ನೀಡಿದಳು. 'ಅವನನ್ನೇ ನೇರವಾಗಿ ಕೇಳಿದರೆ?' ಎಂಬ ಆಲೋಚನೆಯೂ ಸುಳಿಯಿತು. ಅದರ ಹಿಂದೆಯೇ 'ಗಂಡು ಎನ್ನುವ ಅಹಂಕಾರದಲ್ಲಿ ಮಾಡಿದ್ದನ್ನು ಅವನು ಸಮರ್ಥಿಸಿಕೊಳ್ಳುತ್ತಾನೆ. ತಪ್ಪೆಲ್ಲಾ ನನ್ನದೇ ಎನ್ನುವ ಹಾಗೆ ಮಾಡಿಬಿಡುತ್ತಾನೆ. ಎಷ್ಟೇ ಆಗಲಿ, ಮಾತಲ್ಲಿ ಚತುರನಲ್ಲವೇ ಅವನು?' ಈ ಹಿಂದೆ, ಅವನ ಮಾತುಗಳನ್ನು ಕೇಳಿ ಅದೆಷ್ಟು ಬಾರಿ ಸಂತೋಷಿಸಿದ್ದಳೋ. ಈಗ, ಆ ಮಾತುಗಳ ಬಗ್ಗೆ ತಾತ್ಸಾರ ಮೂಡಿತು. 'ಅಥವಾ, ತನ್ನ ಸತ್ಯ ಬಯಲಾಯಿತು ಎಂದು ತಿಳಿದು, ನನ್ನನ್ನೂ, ಮಗುವನ್ನೂ ಬಿಟ್ಟು ಆ ನನ್ನ ಸವತಿಯ ಬಳಿಗೇ ಹೊರಟುಹೋದರೆ?' ಈ ಮಾರ್ಗವೂ ಸೂಕ್ತವಲ್ಲ ಎನಿಸಿತು.  ಬರುತ್ತಿದ್ದ ಆರತಿ ತಟ್ಟೆಗೆ ಎರಡು ರೂಪಾಯಿ ಹಾಕಿ, ಮಂಗಳಾರತಿಯನ್ನು ಸ್ವೀಕರಿಸಿದಳು. 'ನನಗೂ ಒಂದು ತವರೆಂದು ಇದ್ದಿದ್ದರೆ...' ಎಂದು ನಿಟ್ಟುಸಿರು ಬಿಡುತ್ತಾ, ಮಗುವಿನ ಹಣೆಗೆ ದೇವರ ಕುಂಕುಮವಿಟ್ಟ ಅವಳಿಗೆ, ತನ್ನ ಇಡೀ ಜೀವನದಲ್ಲಿ ಎಂದೂ ಕಾಡಿರದ ಏಕಾಂಗಿತನ ಒಮ್ಮೆಲೇ ಅಪ್ಪಳಿಸಿತು. ಅನಾಥಳಾಗೇ, ಒಬ್ಬಂಟಿಯಾಗೇ ಇದ್ದಿದ್ದರೆ ಪ್ರಾಯಶಃ ಅವಳಿಗೆ ಹೀಗನಿಸುತ್ತಿರಲಿಲ್ಲವೇನೋ. ಆದರೆ, ತನ್ನದು ಎಂದು ಭಾವಿಸಿದ ಎರಡೇ ಎರಡು ಜೀವಗಳಲ್ಲಿ, ಒಬ್ಬ ತನ್ನನ್ನು ತೊರೆದು ಹೋಗುತ್ತಿದ್ದಾನೆ ಎನ್ನುವಾಗ, ಅವಳೆಂದೂ ಅನುಭವಿಸಿರದ ಆ ಅನಾಥಪ್ರಜ್ಞೆ ಅವಳಿಗೆ ಭಾರವಾಯಿತು.

ಅವಳ ಕೈ ಹಿಡಿದು, ಇನ್ನೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಅವನು ರಥದ ಕಡೆಗೆ ಸಾಗುತ್ತಿದ್ದ. 'ಅವನನ್ನೂ, ಮಗುವನ್ನೂ ಬಿಟ್ಟು ಹೊರಟುಹೋಗಲೇ? ಹಾ! ಜಾತ್ರೆಯಲ್ಲಿ, ಈ ಜನ ಜಂಗುಳಿಯಲ್ಲಿ, ತಪ್ಪಿಸಿಕೊಂಡಳು ಅನಿಸುವಂತೆ ಹೋಗಬಹುದಲ್ಲಾ...'  ರಥದಲ್ಲಿ  ಉತ್ಸವಮೂರ್ತಿಯನ್ನು ಕೂರಿಸಿ, ಅಲಂಕಾರ ಮಾಡಿದ ಮೇಲೆ, ಅದಕ್ಕೆ ಕಟ್ಟಿದ್ದ ಪರದೆಯನ್ನು ಸರಿಸಿದೊಡನೆ, ಅಲ್ಲಿ ನೆರೆದಿದ್ದ ಜನರೆಲ್ಲಾ 'ಹೋ!' ಎಂದು ಕೂಗಿದರು. 'ನಾನು ಹೊರಟುಹೋದ ಮೇಲೆ, ಮಗುವನ್ನು ಆ ನನ್ನ ಸವತಿ ಹೇಗೆ ನೋಡಿಕೊಂಡಾಳೋ? ನನ್ನಂತೆ, ಅವನಂತೆ ಅನಾಥರಾಗಿ ಬೆಳೆಯಬಹುದು. ಆದರೆ, ಮಲಮಕ್ಕಳಾಗಿ ಬೆಳೆಯುವ ಪಾಡು ಬೇಡ' ಎಂದುಕೊಂಡು, ಆ ಮಾರ್ಗವನ್ನೂ ತಿರಸ್ಕರಿಸಿದಳು. ಅಲ್ಲದೆ, ದೊಡ್ಡವನಾದ ಮೇಲೆ, ತನ್ನ ಮಗುವಿಗೆ ಸತ್ಯ ತಿಳಿದು, ತನ್ನ ತಾಯಿ ಹೇಡಿಯಂತೆ ಸಮಸ್ಯೆಯಿಂದ ಓಡಿಹೋದಳು ಎಂದು ಭಾವಿಸಿದರೆ?  ಸೂರ್ಯನ ಬೆಳಕಿನಲ್ಲಿ ದೇವರ ಬೆಳ್ಳಿಯ ವಿಗ್ರಹ ಹೊಳೆಯುತ್ತಿತ್ತು. ಅವಳ ಕಣ್ಣಲ್ಲಿ ತುಂಬುತ್ತಿದ್ದ ನೀರು ತನ್ನದೇ ಆದ ಹೊಳಪನ್ನು ನೀಡಿತ್ತು. 'ನೀನೆ ಕಾಪಾಡಬೇಕು' ಎಂದು ದೈನ್ಯದಿಂದ ಕೈಮುಗಿದಳು. 

ಅಂದು ಊರಿನವರಿಗೆ, ಭಕ್ತರಿಗೆಲ್ಲಾ ದೇವಸ್ಥಾನದಲ್ಲೇ ಊಟ. ಅಲ್ಲಿ ಹುರುಪಿನಿಂದ ಓಡಾಡುತ್ತಿದ್ದವರನ್ನು ಕಂಡು ಅವಳಿಗೆ ಹಳೆಯದೆಲ್ಲಾ ನೆನಪಾಯಿತು. ಆಗಷ್ಟೇ ಮದುವೆಯಾಗಿದ್ದ ಹೊಸ ಜೋಡಿಗಳನ್ನು ಕಂಡು ಅವಳಿಗೆ ಅಸೂಯೆಯಾಯಿತು. ಆ ಅಸೂಯೆಯ ಅಡಿಯಲ್ಲೇ, ಕಡೆಗೂ ಒಂದು ದಾರಿ ಕಂಡಿತು. ತನ್ನ ಸಮಸ್ಯೆಯನ್ನು ಖಾಯಂ ಆಗಿ ನಿವಾರಿಸದಿದ್ದರೂ, ಸಧ್ಯಕ್ಕೆ ಅವಳಿಗೆ ಅದಕ್ಕಿಂತ ಉತ್ತಮ ಉಪಾಯ ಕಾಣಲಿಲ್ಲ. ಅವಳ ನೆಚ್ಚಿನ ಕೌದಿ ಮುಳ್ಳಿನ ಮೇಲೆ ಬಿದ್ದಂತಾಗಿತ್ತು. ಬಹಳ ನಾಜೂಕಾಗಿ ಅದನ್ನು ತನ್ನತ್ತ ಎಳೆಯಬೇಕಿತ್ತು. ಇಲ್ಲವಾದಲ್ಲಿ, ಅಷ್ಟು ವರ್ಷಗಳ ಪರಿಶ್ರಮ ಹರಿದು ಚೂರಾಗುತ್ತಿತ್ತು. 

ಆ ರಾತ್ರಿ, ಊಟವಾದ ಮೇಲೆ, ಮಗುವನ್ನು ಮಲಗಿಸಿ, ಅವನಿಗೆ ಎಲೆಯಡಿಕೆಯನ್ನು ಮಡಿಸಿಕೊಡುತ್ತಾ ಅವಳು ತಿಂಗಳುಗಳ ಮುಂಚೆ ಕಂಡ ಆ ಕನಸಿನ ಬಗ್ಗೆ ಅವನಿಗೆ ಹೇಳತೊಡಗಿದಳು. ಅವನಿಗಾಗಾಲೇ ಎಷ್ಟೋ ಬಾರಿ ಆ ಕನಸನ್ನು ಹೇಳಿದ್ದರೂ, ಈ ಬಾರಿ ಹೊಸತೆಂಬಂತೆ ಬಣ್ಣಿಸಿದಳು. ಅವರ ಮೂರು ಮಕ್ಕಳ ಬಗ್ಗೆ... ಕೌದಿಯನ್ನು ನಾಲ್ಕು ಭಾಗ ಮಾಡಿದ್ದು...ಮಕ್ಕಳು ಸೊಸೆಯಂದಿರು ಕೌದಿಯನ್ನು ಮುಂದುವರೆಸಿದ್ದು...ಮೊಮ್ಮಕ್ಕಳು...ಮರಿಮಕ್ಕಳು....ಎಲ್ಲವನ್ನೂ ಹೇಳಿದಳು.... 

ಮಾರನೆಯ ದಿನ, ಎಂದಿನಂತೆ, ಕೌದಿಯನ್ನು ಒಗೆದು, ಬಿಸಿಲಿಗೆ ಹರವಿದಳು. ಕೌದಿಗೆ ಹೊಸ ಕಳೆ ತುಂಬಿ, ರಂಗೇರಿತ್ತು. 











No comments:

Post a Comment