Wednesday, March 22, 2017

The Spirit of Sandakphu - Prologue

The trek is over. The hangover is fading. Now that I have sat down to write about it, I am faced with a question. When actually did this story begin taking shape? It surely did not begin on Day 1 of the trek. More importantly, it does not end with that final step with which we reached the end point on the trail. Experiences of that one week will be ruminated over for days, with new insights gained every other time.

Over the next two or three pieces, I shall narrate this story, hoping to capture the spirit of Sandakphu.

                                                         *************

It was in November when a couple of friends and I sat down to make plans for the break in the coming semester. Package tours were too mainstream. Our previous experience had not been great either. That's a story for another day. Besides, a bunch of 20-somethings are expected to do things which are hatke. The idea of 'self-discovery' has been much romanticized. Moreover, 20s is the age when you decide what the philosophy of your life is. It was this that drove us towards the idea of a trek - to find our real selves and where better to delve within than the mighty Himalayas?! December was dedicated for shortlisting treks and trying to get other 'like-minded' friends on board. We also promised that regardless of who joined us or otherwise, the three of us would surely be going.

By January, our group was five-member strong. After much deliberation and debate, to the extent of switching over to the idea of a package tour, we zeroed in on the Sandakphu - Phalut trek offered by India Hikes. The batch of 12th - 18th March seemed tailor-made for our plans. The website said it was a trek for beginners. The trail was through a national park, in a month when flowers would just begin to bloom. The summit provided views of the Everest! What more reason do you need to start a love affair with nature?

A few days after having booked the tickets, one of our friends decided to back out. The reason is still not known to any of us, perhaps even to himself, even after the trek is over. Attempts at convincing him failed miserably. That was, however, only the first wicket to fall. Some days later, two more decided to cancel, with justifiable reasons, though. Of the initial three, only I remained and the group was reduced to two. In fact, until the day that we actually boarded the train, I dreaded that the only other member would decide to back out as well, for whatever reason!

Couple of weeks before the trek was when we decided to burn a hole through our pockets – by purchasing gear and equipment from Decathlon. While shopping was an experience to remember, the fact that we travelled nearly a couple of hundred kilometers for the same is a story in itself. On that fateful day, we travelled to and from the warehouse (which is in the middle of nowhere!) in buses, local trains, cycle rickshaws, auto ricks and motor thelas. Lack of time prevented us from travelling by steamer across the Hooghly, though. By the time we exited the warehouse, we had heavier bags and lighter wallets, having purchased more than what we had intended to!

Our first challenge was not on the trekking trail but on the train to Howrah. Bengal is, of course, a densely populated state. That evening on that local train underlined this for us. We already had difficulty moving with our heavy backpacks. Add to it the heat, sweat and pressure of a crowd trying to push you in every other direction! At one point of time, some of the kids on the train began crying, perhaps because they felt claustrophobic and were gasping for air. In hindsight, it feels that this was the first point along the entire trek which highlighted the value of one of the things we take for granted – breath.

Funnily, though, throughout this prelude to the trek, I felt absolutely no sense of excitement – not while backpacking, not on the night before the trek, not on the train to Howrah. It was replaced with an eerie sense of calmness. Or was it anxiety? I will never know.

Humsafar Express, our train to New Jalpaiguri, our pick-up point, was a couple of hours late that night. Our journey had just begun.
                                                                                                                       

                                                                                                                To be continued…

Thursday, February 23, 2017

ಬಿಡುಗಡೆ

ಅವತ್ತು ಸಂಜೆ ಗಾಂಧಿ ಬಜಾರಿನಿಂದ ಮನೆಗೆ ಬರುತ್ತಿದ್ದಾಗ, ಪಕ್ಕದ ಮನೆಯ ನಾರಾಯಣರಾಯರು ಗೇಟಿನ ಬಳಿಯಲ್ಲಿ ಸಿಕ್ಕರು. ಸುಮಾರು ಎಂಭತ್ತು ವರ್ಷದ ರಾಯರನ್ನು ಕಂಡರೆ ನಮ್ಮ ಬಡಾವಣೆಯ ಎಲ್ಲರಿಗೂ ಪ್ರೀತಿ. ಒಂದು ತೆರನಾದ ಗೌರವ. ನಮ್ಮ ತಲೆಮಾರಿನವರು ಅವರನ್ನು ಸಹಜವಾಗಿಯೇ 'ತಾತ' ಎಂದು ಸಂಬೋಧಿಸುತ್ತೇವೆ. ಅವರಿಗೆ, ಅದೇಕೋ, ನಮ್ಮ ಮನೆಯವರು ಅಂದರೆ ವಿಶೇಷ ಆತ್ಮೀಯತೆ. ನಮಗೂ ಅಷ್ಟೇ. ಮಗ, ಮಗಳು ವಿದೇಶದಲ್ಲಿದ್ದದ್ದರಿಂದ  ಪ್ರತಿ ಹಬ್ಬಕ್ಕೂ ರಾಯರನ್ನು ನಮ್ಮ ಮನೆಗೆ ಊಟಕ್ಕೆ ಕರೆಯುತ್ತೇವೆ. ಅಷ್ಟೇ ಅಲ್ಲ. ಅಮ್ಮ ಮನೆಯಲ್ಲಿ ಏನೇ ಸ್ಪೆಷಲ್ ಅಡಿಗೆ ಮಾಡಿದರೂ ಅವರಿಗೆ ತಲುಪುತ್ತದೆ. ಕಿವಿ ಸ್ವಲ್ಪ ಊನವಾಗಿದೆ  ಎನ್ನುವುದು ಬಿಟ್ಟರೆ, ರಾಯರು ದೃಢವಾಗಿಯೇ ಇದ್ದಾರೆ.

ಗೇಟಿನ ಬಳಿ ಸಿಕ್ಕ ತಾತ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದವರೇ ಅವರ ಮನೆಯ ಹಜಾರದಲ್ಲಿ ಹರಡಿಕೊಂಡಿದ್ದ ಮಾಸಲು ತಿರುಗಿದ್ದ ಕೆಲವು ಪತ್ರಿಕೆಗಳನ್ನೂ ಭಾವಚಿತ್ರಗಳನ್ನೂ ತೋರಿಸಿ ಅವುಗಳ ಹಿಂದಿನ ಕಥೆ ಹೇಳಲು ಶುರು ಮಾಡಿದರು. ಅವುಗಳ ನಡುವೆ ಒಂದು ಹತ್ತು - ಹನ್ನೊಂದು ವರ್ಷದ ಹುಡುಗನ ಭಾವಚಿತ್ರವೂ ಇತ್ತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶಾಲೆಯ ಯಾವುದೋ ಕಾರ್ಯಕ್ರಮಕ್ಕಾಗಿ ತಾತ ಪೋಷಾಕು ಧರಿಸಿದ್ದಾಗ ತೆಗೆದಿದ್ದಂತೆ. ಇವುಗಳನ್ನು ನೆನೆಸಿಕೊಳ್ಳುತ್ತಾ ಸ್ವಲ್ಪ ಭಾವುಕರಾದರು. ಆದರೆ ನನಗೇಕೆ ಇದನ್ನೆಲ್ಲಾ ಹೇಳುತ್ತಿದ್ದಾರೆ ಎಂದು ಅರ್ಥವಾಗದೆ, ಅವರನ್ನು ಕೇಳಿದೆ. "ನನಗಾದರೂ ಇಲ್ಲಿ ಯಾರಿದ್ದಾರೆ? ಮೊಮ್ಮಕ್ಕಳು ಇಲ್ಲೇ ಇದ್ದಿದ್ರೆ, ಅವರಿಗೆ ಹೇಳ್ತಿದ್ದೆ. ಅವರ ಸ್ಥಾನದಲ್ಲಿ ನೀನಿದ್ದೀಯ" ಎಂದು ತಾತ ಹೇಳಿದಾಗ ನನಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ಸ್ವಲ್ಪ ಹೊತ್ತಿನ ನಂತರ "ನೀವು ಯಾಕೆ ಹೋಗಿ ನಿಮ್ಮ ಮಗಳ ಮನೇಲಿ ಸ್ವಲ್ಪ ದಿನ, ಮಗನ ಮನೇಲಿ ಸ್ವಲ್ಪ ದಿನ ಇರಬಾರದು?" ಎಂದು ಕೇಳಿದೆ. ಅದಕ್ಕೆ ತಾತ "ಆ ಪ್ರಯತ್ನಾನೂ ಮಾಡಿದ್ದೀನಿ. ಇವಳು ತೀರಿಹೋದಾಗ ನನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲ ಬಂದಿದ್ರು. ಅದೊಂದೇ ಸಲ ಅನ್ಸತ್ತೆ ಹಾಗೆ ಎಲ್ಲ ಒಟ್ಟಿಗೆ ಸೇರಿದ್ದು. ಇವಳು ಹೋಗಿದ್ದಕ್ಕೆ ಅಳಬೇಕಾ? ಖುಷಿ ಪಡಬೇಕಾ? ಅಂತ ಒಂದು ಕ್ಷಣ ಅರ್ಥವೇ ಆಗ್ಲಿಲ್ಲ! ಹೋಗ್ಲಿ ಬಿಡು. ನಾನೊಬ್ಬನೇ ಇಲ್ಲಿ ಇದ್ದು ಏನು ಮಾಡಬೇಕು ಅಂತ ಮಗ ಎರಡು ಮೂರು ಸಲ ಹೋಗಿ ಬಂದು ಮಾಡಿ ನನ್ನನ್ನ ಅವ್ನ ಜೊತೆ ಕರೆದುಕೊಂಡು ಹೋಗೋದಕ್ಕೆ ವ್ಯವಸ್ಥೆ ಮಾಡಿದ. ಹೋದ ಸ್ವಲ್ಪ ದಿನ ಅವ್ನು, ಸೊಸೆ ಇಬ್ರೂ ರಜ ಹಾಕಿ ನನ್ನ ಜೊತೇನೆ ಇದ್ರು. ದೇಶಾನೂ ಸುತ್ತಿಸಿದ್ರು. ಆದ್ರೆ ಅವ್ರು ಕೂಡ ಎಷ್ಟು ದಿನ ಅಂತ ಈ ಮುದುಕನ ಮುಂದೆ ಕೂರಕ್ಕಾಗತ್ತೆ ಹೇಳು? ಜೀವನ ನಡಿಬೇಡ್ವ? ಅವ್ರು ಕೆಲಸಕ್ಕೆ ಹೋದ್ಮೇಲೆ, ನಾನು ಅಲ್ಲಿ ಟಿವಿ ನೋಡ್ತಾ ಇದ್ದೆ. ಪುಸ್ತಕ ಓದ್ತಾ ಇದ್ದೆ. ಹೇಗೋ ಒಂದೆರಡು ತಿಂಗಳು ತಳ್ಳಿದ್ದಾಯ್ತು. ಆಗ ಅನ್ನಿಸ್ತು. ಇಷ್ಟನ್ನ ಮಾಡಕ್ಕೆ ನಾನು ನನ್ನ ಮನೆ ಬಿಟ್ಟು, ನನ್ನ ಊರು ಬಿಟ್ಟು ಇಲ್ಲಿಗೆ ಯಾಕೆ ಬರಬೇಕಿತ್ತು ಅಂತ. ಮಗನಿಗೆ ಹೇಳಿದೆ. ಪಾಪ, ಕರೆದುಕೊಂಡು ಬಂದು ಬಿಟ್ಟು, ಹೋದ. ಇಲ್ಲಿಗೆ ಬಂದ ತಕ್ಷಣ, ಅದೇನೋ, ಒಂದು ರೀತಿಯ ಬಿಡುಗಡೆ ಸಿಕ್ಕಹಾಗಾಯ್ತು. ಅಲ್ಲಿ ಚೆನ್ನಾಗಿ ನೋಡ್ಕೊತಿರ್ಲಿಲ್ಲ ಅಂತ ಅಲ್ಲ. ನನ್ನ ಸೊಸೆ, ಮಗಳ ಥರಾನೇ ನೋಡ್ಕೋತಾಳೆ. ಮೊಮ್ಮಕ್ಕಳು ಭಾಷೆ ಅಷ್ಟಾಗಿ ಬರದಿದ್ರೂ ದಿನ ಬೆಳಗ್ಗೆ, ರಾತ್ರಿ 'ಗುಡ್ ಮಾರ್ನಿಂಗ್', 'ಗುಡ್ ನೈಟ್' ಅಂತ ತಪ್ಪದೇ ಹೇಳ್ತಾ ಇದ್ರು. ಈ ಮುದುಕಂಗೇನೇ ಅದನ್ನ ಹೇಳಿಸಿಕೊಳ್ಳೋ ಅದೃಷ್ಟ ಇಲ್ಲ" ಎನ್ನುತ್ತಾ ವಿಷಾದದ ನಗೆ ನಕ್ಕರು ರಾಯರು.

ಅದೆಷ್ಟು ಹೊತ್ತು ಹಾಗೇ ಕುಳಿತಿದ್ದೆನೋ? ಕೊನೆಗೆ ತಾತನೇ ಮೌನ ಮುರಿದರು. "ಪಾಪ, ನನ್ನ ಮಕ್ಕಳದ್ದು ಏನೂ ತಪ್ಪಿಲ್ಲ, ಬಿಡು. ಅವರನ್ನ ಚೆನ್ನಾಗಿ ಓದ್ಸಿದ್ದು ಅವ್ರ ಜೀವನ ಅವ್ರು ರೂಪಿಸಿಕೊಬೇಕು ಅಂತ ತಾನೇ? ಹಕ್ಕಿಗೆ ಹಾರೋದು ಹೇಳಿಕೊಟ್ಟು 'ಹಾರಬೇಡ. ಗೂಡಲ್ಲೆ ಇರು' ಅಂದ್ರೆ ಅದು ಕೇಳತ್ತಾ? ನಂಗೇನು ಕಡಿಮೆ ಮಾಡಿಲ್ಲ ನನ್ನ ಮಕ್ಕಳು. ಪ್ರತಿ ತಿಂಗಳು ಹಣ ಕಳಿಸ್ತಾರೆ. ಹೋದ ಸಲ ನನ್ನ ಮಗಳು ಬಂದಿದ್ದಾಗ 'ಇನ್ಮೇಲೆ ನೀನೇ ಅಡಿಗೆ ಮಾಡ್ಕೊಬಾರದು' ಅಂತ ಖಡಾಖಂಡಿತವಾಗಿ ಹೇಳಿ, ಒಬ್ಬ ಅಡಿಗೆಯವಳ್ನ, ಕೆಲಸದವಳ್ನ ಗೊತ್ತು ಮಾಡಿಕೊಟ್ಟು ಹೋದ್ಲು. ಅವ್ಳಿಗೆ ಹಣನೂ ನಾನು ಕೊಡೋದು ಬೇಡ ಅಂದ್ಲು. ತಿಂಗಳಾಗ್ತಾ ಇದ್ದ ಹಾಗೆ ಅವ್ರ ಅಕೌಂಟ್ಗೆ ಕಳಿಸೋ ರೀತಿ ವ್ಯವಸ್ಥೆನೂ ಮಾಡಿದ್ದಾಳೆ. ಎರಡು ದಿನಕ್ಕೆ ಒಂದು ಸಲ ಇಬ್ರಲ್ಲಿ ಒಬ್ರು ಫೋನ್ ಮಾಡ್ತಾರೆ. ವಾರಕ್ಕೋ ಹತ್ತು ದಿನಕ್ಕೋ ಒಂದು ಸಲ ಸ್ಕೈಪ್ ಮಾಡ್ತೀವಿ. ಥೇಟು ಇಲ್ಲೇ ಇದ್ದ ಹಾಗೆ ಆಗತ್ತೆ. ಇಲ್ಲಿ ಇಲ್ಲ ಅಷ್ಟೆ" ಎನ್ನುತ್ತಾ ತಾತ ನಿಟ್ಟುಸಿರು ಬಿಟ್ಟರು.


"ಅಲ್ಲಿಗೆ ಹೋದಮೇಲೆ ಒಂದು ವಿಚಾರ ಗೊತ್ತಾಯ್ತು. ಅಲ್ಲಿ ಎಲ್ಲರೂ ಇದ್ದು ಒಂಟಿಯಾಗಿ ಇರೋದಕ್ಕಿಂತ, ಇಲ್ಲಿ ಒಬ್ಬನೇ ಇದ್ರೂ ನಿಮ್ಮಗಳ ಜೊತೆ, ನಾನು ಬೆಳೆದ ಊರಿನಲ್ಲಿ ಇರೋದೇ ಹೆಚ್ಚು ಸೂಕ್ತ" ಎಂದು ಅವರು ಹೇಳಿದಾಗ ಅವರು ಬಹಳ ಬಳಲಿದ್ದರು ಎಂದು ತಿಳಿಯುತ್ತಿತ್ತು. ಆದರೆ, ಅವರಿಗೆ ನಾನು ಏನೆಂದು ಸಮಾಧಾನ ಹೇಳಲಿ ಎಂದು ತಿಳಿಯದೆ ಒದ್ದಾಡುತ್ತಿದ್ದಾಗ ಮನೆಯಿಂದ ಫೋನ್ ಬಂತು. ತಾತನನ್ನು ಅವರ ಭಾವನೆಗಳೊಂದಿಗೆ ಏಕಾಂತದಲ್ಲಿ ಬಿಟ್ಟು ಹೊರಬಂದಾಗ, ಕಣ್ಣುಗಳು ಮಂಜಾಗಿದ್ದವು.

Wednesday, February 15, 2017

ದೃಷ್ಟಿಕೋನ

ಹೋದ ಮಂಗಳವಾರ ಮನೆಗೆ ಕರೆ ಮಾಡಿದ್ದಾಗ, ಇತರೆ ಹಲವಾರು ವಿಚಾರಗಳ ಜೊತೆಗೆ ಅಣ್ಣ ಮೂರ್ತಿಯವರು ತೀರಿಹೋದ ವಿಚಾರವನ್ನೂ ಹೇಳಿದ. 'ಅಯ್ಯೋ, ಪಾಪ' ಎಂದು ನಾಮ್-ಕೆ-ವಾಸ್ತೆ ಒಂದೆರಡು ಕನಿಕರದ ಮಾತುಗಳನ್ನಾಡಿ ಮಾತು ಬೇರೆಡೆಗೆ ಹೊರಳಿತು. ಆಗ  ಬಾಧಿಸದ ಅವರ ಸಾವಿನ ವಿಚಾರ ಆನಂತರ ಅದೇಕೋ ಕೊರೆಯ ತೊಡಗಿತು. ಅವರೇನು ತೀರಾ ಹತ್ತಿರದ ಸ್ನೇಹಿತರಲ್ಲ. ಸಂಬಂಧಿಯಂತೂ ಅಲ್ಲವೇ ಅಲ್ಲ. ಹೀಗಿದ್ದರೂ ಯಾಕೆ ಬಾಧಿಸುತ್ತಿದೆ ಎಂದು ಅರ್ಥವಾಗದೇ, ಕ್ಯಾಂಟೀನಿನಲ್ಲಿ ಕಾಫಿ ಹೀರುತ್ತಾ ಯೋಚಿಸತೊಡಗಿದೆ. 

ರಾಮಮೂರ್ತಿಯವರು ಎಂದ ಕೂಡಲೇ ಅವರ ರೂಪಕ್ಕಿಂತ ಮೊದಲು, ಮೂಗಿನಲ್ಲಿ ಮಾತಾಡುತ್ತಿದ್ದ ಅವರ ಧ್ವನಿ ನೆನಪಾಗುತ್ತಿತ್ತು. ಅದೇ ಧ್ವನಿಯಲ್ಲಿ ತಕ್ಕ ಮಟ್ಟಿಗೆ ಸುಶ್ರಾವ್ಯವಾಗಿ ಹಾಡುತ್ತಿದ್ದರು ಕೂಡ. ಒಂದು ಕಾಲದಲ್ಲಿ ಕರ್ನಾಟಕದ ರಣಜಿ ತಂಡದಲ್ಲಿ ಆಡಿದ್ದರಂತೆ. ಅವರಿಗೆ ಮದುವೆಯಾಗಿರಲಿಲ್ಲವೆಂದೂ, ಅವರ ಸೋದರ ಸಂಬಂಧಿಗಳು ಮೋಸ ಮಾಡಿ ಪಿತ್ರಾರ್ಜಿತವಾಗಿ ಬಂದಿದ್ದ ಮನೆ ಕಸಿದುಕೊಂಡರೆಂದು ಅಪ್ಪ, ಮಾವ ಇವರುಗಳು ಎಂದೋ ಇನ್ಯಾವುದೋ ಸಂಭಾಷಣೆಯಲ್ಲಿ ಹೇಳಿದ್ದು ನೆನಪಾಯಿತು. 

ನನಗೆ ನೆನಪಿದ್ದಾಗಿನಿಂದಲೂ ಮೂರ್ತಿಯವರದ್ದು ಮುಕ್ಕಾಲು ಬೋಳುತಲೆ. ಇದ್ದ ಸ್ವಲ್ಪ ಬಿಳಿಕೂದಲನ್ನು ಚೆನ್ನಾಗಿ ಬಾಚಿ, ಬಿಸಿಲಿನಲ್ಲಿ ಹೊಳೆಯುವಂತೆ ಬುರುಡೆಗೆ ಎಣ್ಣೆ ತಿಕ್ಕಿ, ನಮ್ಮ ಮನೆಯಿದ್ದ ರಸ್ತೆಯ ಮೂಲಕವಾಗಿ ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಖಾದಿ ಜುಬ್ಬಾ ಪಂಚೆಯೊಂದಿಗೆ ಶಲ್ಯ ಹೊದ್ದು, ದಾರಿಯುದ್ದಕ್ಕೂ "ನಾನು ಕ್ರಿಕೆಟ್ ಆಟ ಆಡೋದಕ್ಕೆ..." ಎಂದು ಸ್ವರಚಿತ ಹಾಡೊಂದನ್ನು ರಾಗವಾಗಿ ಹಾಡುತ್ತಿದ್ದರು. ಆ ಹಾಡು ಕೇಳಲಿಕ್ಕೆಂದೇ ಎಷ್ಟೋ ಬಾರಿ ಮನೆಯಿಂದ ಹೊರಗೆ ಬಂದು ನಿಂತಿರುತ್ತಿದ್ದೆ. ದೇವಸ್ಥಾನದಲ್ಲಿ ಅರ್ಚನೆ-ಅಭಿಷೇಕಗಳ ಚೀಟಿ ಬರೆಯುತ್ತಿದ್ದ ಅವರು, ನಾನು ನಮ್ಮ ಮಾವನೊಂದಿಗೆ ಪ್ರತಿ ಮಂಗಳವಾರ ದೇವಸ್ಥಾನಕ್ಕೆ ಹೋದಾಗ, ಕರೆದು ತೆಂಗಿನಕಾಯಿ ಚೂರುಗಳನ್ನೋ, ಬಾಳೆಹಣ್ಣೊಂದನ್ನೋ ಕೊಡುತ್ತಿದ್ದರು. ಇದೆಲ್ಲ ಸುಮಾರು ವರ್ಷಗಳ ಹಿಂದಿನ ಮಾತು. 

ಹೀಗಿರುವಾಗ, ಇದ್ದಕ್ಕಿದಂತೆ ಮೂರ್ತಿಯವರು ದೇವಸ್ಥಾನದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದರು. ಕಾಯಿ ಚೂರು ಬಾಳೆಹಣ್ಣುಗಳು ತಪ್ಪಿ ಹೋಗುವ ಆತಂಕದಲ್ಲಿ ನಾನು ಮನೆಗೆ ಬಂದಿದ್ದ ಅತ್ತೆ, ಮಾವನನ್ನು ಮೂರ್ತಿಯವರ  ಬಗ್ಗೆ ಕೇಳಿದೆ. "ಲೆಕ್ಕದಲ್ಲಿ ತಪ್ಪು ಮಾಡಿದರಂತೆ" ಎಂದು ಹೇಳಿ ಮಾತು ತೇಲಿಸಿದ ಅವರು, ಆನಂತರ ನನಗೆ ಏನೂ ತಿಳಿಯದ ವಯಸ್ಸು ಎಂದು ಭಾವಿಸಿ ನನ್ನ ಮುಂದೆಯೇ ಒಳಕಾರಣವನ್ನು ಅಪ್ಪ ಅಮ್ಮನೊಡನೆ ಚರ್ಚಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅರ್ಚನೆಗಾಗಿ ಬರೆಸಲು ಹೆಂಗಸರು ಬಂದಾಗ ಮೂರ್ತಿಯವರು ಬೇಕೆಂದೇ ತಡ ಮಾಡುತ್ತಿದ್ದರಂತೆ. ಅಗತ್ಯಕ್ಕಿಂತ ಹೆಚ್ಚಿನ ಸಲಿಗೆಯಿಂದ ಅವರೊಡನೆ ಮಾತಾಡುತ್ತಿದ್ದರಂತೆ. ಇದನ್ನು ಅದ್ಯಾರೋ ದತ್ತಿಯ ಗಮನಕ್ಕೆ ತಂದು, ಆಡಳಿತ ಮಂಡಳಿಯವರು ಅವರನ್ನು ವಜಾಗೊಳಿಸಿದರು ಎಂದು ನಮ್ಮ ಮಾವನಿಗೆ ಪರಿಚಯವಿದ್ದ ಅರ್ಚಕರೊಬ್ಬರು ತೀರ್ಥ, ಪ್ರಸಾದಗಳನ್ನು ವಿತರಿಸುವಾಗ ಹೇಳಿದರಂತೆ. 

ಇದ್ದ ಪ್ರಾಯಶಃ ಒಂದೇ ಒಂದು ಆದಾಯದ ಮೂಲವನ್ನು ಕಳೆದುಕೊಂಡ ಮೇಲೆ ಮೂರ್ತಿಯವರು ಕಳೆಗುಂದುತ್ತಾ ಬಂದರು. ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲೂ, ಶನಿವಾರಗಳಂದು ಹನುಮಂತನಗರದ ನರಸಿಂಹಸ್ವಾಮಿ ದೇವಸ್ಥಾನದಲ್ಲೂ, ಸಂಕಷ್ಟಹರ ಚತುರ್ಥಿಯ ದಿನ ದೊಡ್ಡ ಗಣೇಶನ ಗುಡಿಯಲ್ಲೂ ಮೂರ್ತಿಯವರು ಕಾಣುತ್ತಿದ್ದರು. ಎಷ್ಟೇ ಜನರಿದ್ದರೂ, ಅವರ ಮಾತಿನ ಸದ್ದು ಮೀರಿ,  ಮೂರ್ತಿಯವರು "ವಾತಾಪಿ ಗಣಪತಿಮ್ ಭಜೇ..." ಎಂದೋ "ಶ್ರೀಮನ್ನಾರಾಯಣ..."  ಎಂದೋ ಹಾಡುತ್ತಿದ್ದದ್ದು ಕೇಳುತ್ತಿತ್ತು. ದೇವಸ್ಥಾನಕ್ಕೆ ಬಂದ ಜನ ಮೂರ್ತಿಯವರ ಶಲ್ಯದೊಳಗೆ ಒಂದು ರೂಪಾಯಿ, ಎರಡು ರೂಪಾಯಿ ಹಾಕಿದಾಗ ಅವರು ಕೈಯೆತ್ತಿ ಮುಗಿಯುತ್ತಿದ್ದದ್ದು ನೆನೆಸಿಕೊಂಡರೆ ಒಂದು ತೆರನಾದ ಸಂಕಟವಾಗುತ್ತದೆ. ಅವರೊಡನೆ ಮಾತಾಡಿ ಬರುತ್ತೇನೆ ಎಂದು ಹೇಳಿದಾಗ, ಅಮ್ಮ ಕಾರಣ ಹೇಳದೆಯೇ, "ಆ ಮುದುಕನ ಜೊತೆ ನಿಂದೇನು ಮಾತು?!" ಎಂದು ಗದರಿ, ಎಳೆದುಕೊಂಡು ಬರುತ್ತಿದ್ದರು.   ರಸ್ತೆಯಲ್ಲಿ ಒಂದೆರಡು ಬಾರಿ ಕಂಡಾಗ ಅವರನ್ನು ನೋಡಿ ಪರಿಚಯದ ನಗೆ ನಕ್ಕೆನೇ ಹೊರತು, ಹೋಗಿ ಮಾತಾಡಲಿಲ್ಲ - ಅಮ್ಮನಿಗೆ ಹೆದರಿ. 

ಆನಂತರದ ವರ್ಷಗಳಲ್ಲಿ ಮೂರ್ತಿಯವರ ನೆನಪುಗಳು ಮಾಸಲು ಆರಂಭವಾಯಿತು ಎಂದು ಕಾಣುತ್ತದೆ. ನನ್ನನ್ನು ಕಂಡರೆ ಅಪರಿಚಿತರಂತೆ ಕಾಣುತ್ತಿದ್ದರು. ತಮ್ಮ ಬಗ್ಗೆಯೂ ಅವರಿಗೆ ನಿಗಾ ಕಡಿಮೆಯಾಗಿರಬೇಕು. ಕೊಳಕಾದ  ಜುಬ್ಬವನ್ನೇ ಧರಿಸುತ್ತಾ, ಇದ್ದ ಸ್ವಲ್ಪ ಕೂದಲು ಕೆದರಿದ್ದರೂ ಬಾಚದೆ ಓಡಾಡುತ್ತಿದ್ದರು. ಇಷ್ಟಾದರೂ, ಮತ್ತೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ, ನಾನು ಕಂಡಂತೆ, ಕಾಲಿಡಲಿಲ್ಲ. ನಮ್ಮೊಡನೆ ಅಷ್ಟು ಆತ್ಮೀಯವಾಗಿದ್ದ ಅವರು ಹೀಗೆ ಹುಚ್ಚನಂತೆ ಓಡಾಡುತ್ತಿರುವಾಗಲೂ ನಮ್ಮ ಮನೆಯವರಾಗಲಿ ಅಥವಾ ಅವರಿಗೆ ಪರಿಚಯವಿದ್ದ ಬೇರೆಯವರಾಗಲಿ ಯಾಕೆ ಏನೂ ಸಹಾಯ ಮಾಡಲಿಲ್ಲ ಎಂದು ನನಗೆ ಅರ್ಥವಾಗಿಲ್ಲ. 

ಸ್ವಲ್ಪ ತಿಳಿವಳಿಕೆ ಬಂದಾಗಿನಿಂದ ಹಲವು ಬಾರಿ ಮೂರ್ತಿಯವರನ್ನು ಕೆಲಸದಿಂದ ತೆಗೆದು ಹಾಕಿದ ಘಟನೆಯ ಕುರಿತಾಗಿ, ನಾನು ಗ್ರಹಿಸಿಕೊಂಡಿರುವ ರಾಮಮೂರ್ತಿಯವರ ಕುರಿತಾಗಿ ಯೋಚಿಸಿದ್ದೇನೆ. ನನಗೆ ಆ ಆರೋಪದಲ್ಲಿ ತಿರುಳು ಕಂಡಿಲ್ಲ. ಅವರ ನೆನಪಿಗೆ ನ್ಯಾಯವೊದಗಿಸಿದ ಆತ್ಮತೃಪ್ತಿಯೊಂದನ್ನು ಬಿಟ್ಟರೆ ನನ್ನ ಈ ತೀರ್ಪಿನಿಂದ  ಯಾರಿಗೆ ಏನಾಗಬೇಕಿದೆ?  ಎಂದುಕೊಳ್ಳುತ್ತಾ ಕಾಫಿ ಲೋಟವನ್ನು ಬುಟ್ಟಿಗೆ ಎಸೆದು ರೂಮಿಗೆ ಬಂದೆ.



Tuesday, February 7, 2017

Yours Whimsically - Part 8: Book Thieves

After Class 7, I had an opportunity to go on a trek to the Himalayas. It was successful, with some lessons on independence and responsibility for a boy just entering into his teens. On returning, one of my uncles, a writer himself, asked me to write down my experiences in the form of a travelogue. In hindsight, I think it was merely a passing remark or at the most, he meant it as an exercise in organizing my thoughts on paper. However, I took it seriously. So serious that even before I wrote a single word, I was mentally writing down a guest list for the book release and rehearsing a few lines of the speech I would make at the event, desperately trying to sound mature beyond my years!

It took me a couple of months to complete the first (and only) draft. A full eighty-pages of a king-sized notebook. When my uncle came home, he glanced through the draft and even read a few lines aloud, acknowledging and appreciating the effort. He agreed to read it and review it, before any thought could be given to publishing it. He took it home and while they were shifting houses a few days later, the book seemed to have developed a will of its own and disappeared from the face of the earth. That was the last I ever heard of my nameless travelogue.

Some of us in the family share a similar interest in books. Relatives who come home, at the least, glance cursorily at the collection before leaving. These are moments of tremendous anxiety for my brother and me. 'What if they decide to take a book which we plan to read?' Children in Indian households are brought up to never say 'No' to elders and specially, relatives. However, that is not the only reason for our anxiety. Experience has taught us that every now and then, we invariably bid farewell to a book for the very last time. Any attempt to convince our parents to ask the concerned party to respectfully return the book to the rightful owners is met with "What would she think if we asked - for a mere book?" It is very difficult to fathom the undercurrents at play in a middle-class Indian family. For some days, my brother and I employed the (seemingly rude) strategy of rehabilitating vulnerable books in our wardrobes (where nobody would look into) at any remote sign of impending 'danger'!

Trysts with friends in this regard haven't been positive either. The very first time a friend of mine borrowed a book was when we were in high-school. Those were times when '3 Idiots' was rewriting box-office records and my friend felt compelled to read Chetan Bhagat's 'Five Point Someone'. I am not sure if he read the book or otherwise. However, it has been more than six years since and there is no sign of the book being returned. While some may argue that it worked in my favor by ridding me of a Chetan Bhagat book, it is, ultimately, a book.

It is for these reasons that we came up with a not-so-rude strategy the last time we reorganized the book shelf. We now have a catalogue of all the books in our possession. Every time a book leaves the perimeter of the house, it is dutifully recorded into the catalogue, with details of who it has been taken by and when.

It is not that the idea of a Kindle hasn't crossed the mind. But then, electronic copies of books, however convenient, don't give you an opportunity to show off the opulence, do they?!





Tuesday, January 31, 2017

ಮದುವೆ ಪ್ರಸಂಗ

ಅಜ್ಜಿ ನಮ್ಮ ಮನೆಗೆ ಬಂದಿದ್ದಾಗ ಒಂದು ಮಧ್ಯಾಹ್ನ, ನನಗೆ  ಹೊತ್ತು ಕಳೆಯುವುದು ಹೇಗೆಂದು ತೋಚದೆ ಅವರ ಬಳಿ ಹೋಗಿ, ಅವರ ಮದುವೆಯ ಸಂದರ್ಭದ ಕತೆಗಳನ್ನು ಹೇಳುವಂತೆ ಕೇಳಿದೆ. ಆಗ ಅವರು ತಮ್ಮ ನೆನಪನ್ನು ಕೆದಕುತ್ತಾ ಈ ಕತೆಯನ್ನು ನನಗೆ ಹೇಳಿದರು.

"ಇದೆಲ್ಲ ಸುಮಾರು ಅರವತ್ತೈದು ವರ್ಷದ ಹಿಂದಿನ ಕತೆ. ಆಗಿನ್ನೂ ನನಗೆ ಮದುವೆ ಗೊತ್ತಾಗಿರಲಿಲ್ಲ. ನನ್ನ ವಯಸ್ಸಿನ ನನ್ನಿಬ್ಬರು ಗೆಳತಿಯರಿಗೂ ಕೂಡ. ಲಕ್ಷ್ಮಿ ಅಂತ ಒಬ್ಬಳ ಹೆಸರು. ಇನ್ನೊಬ್ಬಳು ವಿಮಲಾ ಅಂತ. ಆ ಲಕ್ಷ್ಮಿಗೆ ಒಬ್ಬ ಅಣ್ಣ ಇದ್ದ - ಚಂದ್ರು ಅಂತ. 

"ವಿಮಲಾಳ ತಂದೆಗೆ ಅವಳನ್ನ ಚಂದ್ರುವಿಗೆ ಕೊಟ್ಟು ಮದುವೆ ಮಾಡಬೇಕು ಅಂತ ಅನ್ನಿಸಿ, ಅದೇ ಮಾತನ್ನ ಲಕ್ಷ್ಮಿಯ ತಂದೆಯೊಂದಿಗೆ ಪ್ರಸ್ತಾಪ ಮಾಡಿದ್ರು. ವಿಮಲಾ ಬಹಳ ಒಳ್ಳೆ ಹುಡುಗಿ. ಅಲ್ಲದೆ, ಅವಳು ಲಕ್ಷ್ಮಿ ಬಹಳ ಒಳ್ಳೆ ಸ್ನೇಹಿತೆಯರಾಗಿದ್ರಿಂದ, ನಾಳೆ ಮದುವೆ  ಆಗಿ ಬಂದಮೇಲೂ ಅತ್ತಿಗೆ - ನಾದಿನೀರು  ಜಗಳವಾಡಿ ಮನೆ ಒಡೆಯೋ ಪ್ರಸಂಗ ಬರಲ್ಲ ಅಂತ ಅವರಿಗೂ ಅನ್ನಿಸರಬೇಕು. ಅವರೂ ಒಪ್ಪಿಕೊಂಡ್ರು. ಲಕ್ಷ್ಮೀಗಂತೂ ವಿಮಲಾ ತನ್ನ ಅತ್ತಿಗೆಯಾಗಿ ಬರ್ತಾಳೆ ಅಂತ ಬಹಳ ಖುಷಿಯಾಯ್ತು. ನನಗೂ ಅಷ್ಟೇ. ನಮ್ಮ ಮನೇಲೆ ಮದುವೆ ನಡಿಯೋ ಅಷ್ಟು ಸಂತೋಷ!

"ಹೀಗಿರುವಾಗ, ಒಂದು ದಿನ ನಾವು ಮೂವರು ಲಕ್ಷ್ಮಿಯ ಮನೇಲಿ ಕೂತು ಹರಟುತ್ತಿದ್ವಿ. ಲಕ್ಷ್ಮಿಯ ತಂದೇನೂ ವಿಮಲಾಳ ತಂದೇನೂ ಹೊರಗಡೆ ಕೂತು ಕೊಟ್ಟು - ಕೊಳ್ಳುವ ವಿಚಾರವಾಗಿ ಏನೋ ಮಾತಾಡ್ತಿದ್ರು. ಇದ್ದಕ್ಕಿದ್ದ ಹಾಗೆ, ವಿಮಲಾ ಹೊರಗೆ ಹೋಗಿ 'ಅಪ್ಪ, ನಂಗೆ ಈ ಮದುವೆ ಬೇಡ' ಅಂದ್ಲು. ನಮ್ಗೆಲ್ಲಾ ಬಹಳ ಆಶ್ಚರ್ಯ ಆಯ್ತು. ಚಂದ್ರು ಅಂತ ಹುಡ್ಗ ಸಿಗೊಕ್ಕೆ ಪುಣ್ಯ ಮಾಡಿರ್ಬೇಕು ಅಂತ ಹಲವಾರು ಬಾರಿ ನಾವುಗಳು ಮಾತಾಡಿಕೊಂಡಿದ್ದುಂಟು. ಈಗ ನೋಡಿದ್ರೆ ಅವಳು ಹೀಗೆ ಹೇಳ್ತಿದ್ದಾಳೆ! ಅವಳ ತಂದೆ ಬಹಳ ನಯವಾಗಿ 'ಯಾಕಮ್ಮ?' ಅಂತ ಕೇಳಿದ್ರು. 'ನಾನು ಈ ಮದುವೆಗೆ ಒಪ್ಪಿದ್ದೇ ಲಕ್ಷ್ಮಿಯ ಜೊತೇಲಿ ಇರಬಹುದು ಅಂತ. ನನಗೆ ಲಕ್ಷ್ಮಿ ಜೊತೇಲೆ ಮದುವೆ ಮಾಡಿ' ಅಂತ ಹೇಳಿ, ಯಾರ ಜೊತೆಗೂ ಇನ್ನೊಂದು ಮಾತಾಡದೆ ಹೊರನಡೆದುಬಿಟ್ಟಳು. 

"ವಿಮಲಾಳ ತಂದೆ 'ಇದ್ಯಾವ ಗಾಳಿ ಮೆಟ್ಟಿಕೊಳ್ತು?' ಎನ್ನುತ್ತಾ ಒಂದಷ್ಟು ನಿಮಿಷ ದಿಕ್ಕೇ ತೋಚದೆ ಕೂತುಬಿಟ್ರು. ನಮಗೂ ಏನು ನಡೀತಿದೇ ಅಂತ ಅರ್ಥ ಆಗ್ಲಿಲ್ಲ. ಲಕ್ಷ್ಮಿಯ ತಂದೆ 'ಹುಚ್ಚು ಹುಡುಗಿ! ಪಾಪ ಮದುವೆಯ ಬಗ್ಗೆ ಹೆದರಿರಬೇಕು. ಮನೆಗೆ ಹೋಗಿ ಸ್ವಲ್ಪ ಸಮಾಧಾನವಾಗಿ ಕೂತು ಮಾತಾಡಿ' ಎಂದು ಅವರಿಗೆ ಧೈರ್ಯ ಹೇಳಿದರು. 

"ಇದಾದ ಒಂದೆರಡು ವಾರಗಳು ಮದುವೆಯ ಬಗ್ಗೆ ಯಾರೂ ಏನೂ ಮಾತಾಡಲಿಲ್ಲ. ಆನಂತರ ಮತ್ತೆ ವಿಮಲಾಳನ್ನು ಕೇಳಿದಾಗ, ಅವಳು ಅದೇ ಉತ್ತರ ಕೊಟ್ಟಳಂತೆ. ಅವಳ ತಂದೆಗೆ ಜಂಘಾಬಲವೇ ಇಲ್ಲದ ಹಾಗಾಯ್ತು. ಏನೂ ತೋಚದೆ ನಮ್ಮಪ್ಪನ ಹತ್ತಿರವೂ, ಲಕ್ಷ್ಮಿಯ ತಂದೆ ಹತ್ತಿರವೂ ಹೇಳಿಕೊಂಡ್ರು. ಯಾರಾದ್ರೂ ಮಾಟ ಮಾಡ್ಸಿರ್ಬೇಕು ಅನ್ನಿಸಿ, ನಮ್ಮೂರಿನ ಬಳಿಯಿದ್ದ ಒಬ್ಬ ಮಂತ್ರವಾದಿ ಹತ್ರ ಹೋದ್ರಂತೆ. ಅವ್ನು ಪ್ರಶ್ನೆ ಹಾಕಿ ನೋಡಿ, ಇದೆಲ್ಲ ಆ ರಮೇಶನ ಆತ್ಮದ್ದೇ ಕಿತಾಪತಿ ಅಂದನಂತೆ. 

"ಆಗ ಒಂದೆರಡು ವರ್ಷದ ಮುಂಚೆ, ನಮ್ಮ ಬೀದಿಲೀ ರಮೇಶ ಅಂತ ಒಬ್ಬ ಹುಡುಗ ಇದ್ದ. ಲಕ್ಶ್ಮೀನಾ ಮದ್ವೆ ಮಾಡ್ಕೋ ಅಂತ ಬಹಳ ಪೀಡಿಸ್ತಿದ್ದ. ನೋಡೋವರಿಗು ಲಕ್ಷ್ಮಿ ನೋಡಿ ಅವಳ ಅಪ್ಪಂಗೆ ಹೇಳಿದ್ಲು. ಅವ್ರು ಊರಿನೋರ ಮುಂದೆ ಅವ್ನಿಗೆ ಬೈದು, ಕಪಾಳಕ್ಕೆ ಹೊಡೆದು ಔಮಾನ ಮಾಡಿದ್ರು. ಅದಾದ ಸ್ವಲ್ಪ ದಿನಕ್ಕೆ ಅವ್ನು ವಿಷ ತೊಗೊಂಡು ಸತ್ತೋದ. ಈಗ ಅವನು ವಿಮಲಾಳ ಒಳಗೆ ಸೇರ್ಕೊಂಡು ಹೀಗೆಲ್ಲ ಮಾಡ್ತಿದಾನೆ ಅಂತ ಆ ಮಂತ್ರವಾದಿ ಹೇಳ್ದ. 

"ಮದ್ವೆ ದಿನ ತೀರಾ ಹತ್ರ ಆಗೋದ್ರೊಳ್ಗೆ ಇದನೆಲ್ಲ ಕಳ್ಕೋಬೇಕು ಅಂತ ವಿಮಲಾಳ ತಂದೆ ಆ ಮಂತ್ರವಾದೀನಾ ಮನೆಗೇ ಕರಿಸಿದ್ರು. ನಾನು ನೋಡಕ್ಕೆ ಹೋಗ್ಲಿಲ್ಲ. ಆದ್ರೆ, ಪಕ್ಕದ ಮನೇಲಿ ನಿಂತು ಎಲ್ಲ ಕೇಳ್ತಾಯಿದ್ದೆ. ಅವ್ನು ಭೂತ ಬಿಡಿಸಿದನೋ ಏನೋ ಗೊತ್ತಿಲ್ಲ. ವಿಮಲಾ ನೋವಿನಿಂದ ನರಳಿದ್ದು, ಜೋರಾಗಿ ಚೀರಿದ್ದು ಮಾತ್ರ ಗೊತ್ತು ನಂಗೆ. ಮಂತ್ರವಾದಿ ಹೋದ ಮೇಲೆ ಹೋಗಿ ನೋಡಿದ್ರೆ, ಅವಳು ಅತ್ತೂ ಅತ್ತೂ, ಸುಸ್ತಾಗಿ ಮಲಗಿದ್ದಳು. ಅವಳ ಮೈಮೇಲೆಲ್ಲಾ ಬರೆಗಳು. ಅದ್ಯಾವ ಕಡ್ಡೀಲಿ ಹೊಡೆದಿದ್ನೋ ಹಾಳಾದವ್ನು! 

"ಬರೆಯ ಗಾಯಗಳು ಮರೆಯಾಗೋ ವೇಳೆಗೆ ಮದುವೆಯ ದಿನ ಬಂದೇಬಿಡ್ತು. ವಿಮಲಾಳ ತಂದೆಗಿದ್ದ ಒಂದೇ ಒಂದು ಆತಂಕ ಅಂದ್ರೆ ಮದುವೆಯ ದಿನ ಯಾರಾದ್ರೂ ಬಂದು ಅವರ ಮಗಳಿಗೆ ಮೆಟ್ಕೊಂಡಿದ್ದ ಗಾಳೀ ಬಗ್ಗೆ ಕೇಳಬಹುದು ಅಂತ. ಪುಣ್ಯಕ್ಕೆ, ಹಾಗೇನು ಆಗ್ಲಿಲ್ಲ. ಎಲ್ಲ ಸುಸೂತ್ರವಾಗಿ ಮುಗೀತು. 

"ಮದುವೆಯಾಗಿ ಮೂರು ತಿಂಗಳಾಗಿರಬೇಕು. ಒಂದು ದಿನ, ಮನೇಲಿ ಯಾರು ಇಲ್ಲದ ಸಮಯ ನೋಡಿ, ವಿಮಲಾ ವಿಷ ತೊಗೊಂಡು ಪ್ರಾಣ ಕಳ್ಕೊಂಡ್ಳು. ರಮೇಶ ಆ ಮನೆ ಮೇಲೆ ಸೇಡು ತೀರಿಸ್ಕೊಂಡ ಅಂತ ಊರಲ್ಲಿ ಎಲ್ರೂ ಮಾತಾಡ್ಕೊಂಡ್ರು. ಆಮೇಲೆ, ಲಕ್ಷ್ಮಿ ಮದುವೆಯಾಗಿ ಬೇರೆ ಮನೆಗೆ, ಬೇರೆ ಊರಿಗೆ ಹೋದ್ಲು. ನಾನು ನಿಮ್ಮ ತಾತನ್ನ ಮನೆಗೆ ಬಂದೆ. ಈಗ ಅವ್ಳು ಎಲ್ಲಿದ್ದಾಳೋ? ಅಥವಾ ಇಲ್ಲವೇ ಇಲ್ವೋ" ಎಂದು ಹೇಳುತ್ತಾ ಅಜ್ಜಿ ಹೊರಗಡೆ ಓಡಾಡುತ್ತಿದ್ದ ಗಾಡಿಗಳ ಕಡೆ ಮುಖ ಮಾಡಿದರು. .

ಅಜ್ಜಿಯನ್ನು ಅವರ ನೆನಪುಗಳ, ಭಾವನೆಗಳ ಜೊತೆ ಇರಲು ಬಿಟ್ಟು ಒಳನಡೆಯಲು ಏಳಬೇಕೆಂದಿದ್ದಾಗ ಅಜ್ಜಿಯೇ ಮಾತಿಗಿಳಿದರು. "ನಂಗೇನನ್ಸತ್ತೆ ಗೊತ್ತಾ? ವಿಮಲಂಗೆ ಯಾವ ಭೂತಾನೂ ಮೆಟ್ಟ್ಕೊಂಡಿರಲಿಲ್ಲ. ಅವ್ಳಿಗೆ ಹುಡ್ಗನ್ನ ಬದ್ಲು ಒಬ್ಬ ಹುಡ್ಗಿ ಮೇಲೆ ಪ್ರೀತಿ ಇತ್ತು. ತಪ್ಪೇನು? ಅಬ್ಬಬ್ಬಾ ಅಂದ್ರೆ ಮದ್ವೆ ಆಗ್ತಿರ್ಲಿಲ್ಲ, ಅಷ್ಟೇ ತಾನೇ? ಆ ಮಂತ್ರವಾದಿನಾ ಕರ್ಸಿ ಮದ್ವೆ ಏನೋ ಮಾಡ್ಸಿದ್ರು. ಆದ್ರೇ, ಅವ್ನನ್ನ ಕರೆಸ್ದೆ ಇದ್ದಿದ್ರೆ, ವಿಮಲಾ ಇನ್ನಷ್ಟು ದಿನ ಜೀವಂತವಾಗಿ ಇರ್ತಿದ್ಲೋ ಏನೋ" ಎಂದು ಹೇಳುವಾಗ ಅಜ್ಜಿಯ ಧ್ವನಿ ಭಾರವಾಗಿತ್ತು. "ಈ ಮಾತನ್ನ ನಾನೇನಾದ್ರೂ ಆಗ ಹೇಳಿದ್ದಿದ್ರೆ, ಅವಳ ಜೊತೆ ನಂಗೂ ಆ ಮಂತ್ರವಾದಿ ಬರೇ ಬೀಳೋವರ್ಗು ಹೊಡೀತಿದ್ನೇನೋ" ಎಂದು ಹೇಳಿ, ವ್ಯಂಗ್ಯವಾಗಿ ನಗುತ್ತಾ ಅಜ್ಜಿ ಒಳನಡೆದರು. 



Wednesday, January 18, 2017

ಶ್ರಾದ್ಧದ ಸುತ್ತಾಮುತ್ತಾ...

ಮಸುಕು ಮಸುಕಾದ ಬಾಲ್ಯದ ನೆನಪುಗಳಲ್ಲಿ ನಮ್ಮ ತಾತ ತೀರಿಹೋಗಿದ್ದು ಸಹ ಒಂದು. ಆಗ ನನಗೆ ಮೂರೂ ತುಂಬಿರಲಿಲ್ಲ. ನಮ್ಮತ್ತೆಯ ಮನೆಯ ವೆರಾಂಡಾದಲ್ಲಿ ಬಿಳಿಯ ಬಟ್ಟೆಯಲ್ಲಿ ಮಲಗಿದ್ದ ತಾತ ಏಳುತಿಲ್ಲವಲ್ಲಾ ಎಂದು ಕೇಳಿದ್ದು ಅಸ್ಪಷ್ಟವಾಗಿ ಜ್ಞಾಪಕವಿದೆ (ಅಥವಾ ಹಾಗೆ ನಾನು ಚಿತ್ರಿಸಿಕೊಂಡಿದ್ದೇನೆಯೋ? ಗೊತ್ತಿಲ್ಲ!). ಸಾವಿನ ಬಗ್ಗೆ ಅರಿವಿಲ್ಲದ ಆ ವಯಸ್ಸಿನಲ್ಲಿ, ಇನ್ನು ಮುಂದೆ ತಾತ ಮನೆಯಲ್ಲಿ ನಮ್ಮ ಜೊತೆ ಇರುವುದಿಲ್ಲ ಎಂಬುದೊಂದು ಬಿಟ್ಟರೆ ಬೇರೇನೂ ತಿಳಿಯಲಿಲ್ಲ. (ಸಾವಿನ ಬಗ್ಗೆ ಈಗ 'ಅರಿವಿ'ದೆ ಎಂದು ನಾನು ಹೇಳುತ್ತಿಲ್ಲ. ಹಾಗೆ ಭಾವಿಸಲೂಬಾರದು.) 

ತದನಂತರ, ಪ್ರತೀ ವರ್ಷ ನಾನು ನಮ್ಮ ತಾತನ ತಿಥಿಗಾಗಿ ಕಾಯುತ್ತಿದ್ದೆ. ಏಕೆಂದರೆ, ತಿಥಿಮನೆಯ ಹುಳಿಗೆ ಇರುವ ರುಚಿ ಬೇರೆಯ ಹುಳಿಗಳಿಗೆ  ಖಂಡಿತ ಇರುವುದಿಲ್ಲ. ಅದೂ ಅಲ್ಲದೆ, ವಡೆ-ಪಾಯಸ, ಆಂಬೊಡೆಗಳ ಜೊತೆಗೆ ಸಜ್ಜಪ್ಪವೋ ರವೆಯುಂಡೆಯೋ ಇರುತ್ತಿತ್ತು. ಅಡುಗೆಯವರಿಗೆ ಸ್ವಲ್ಪ ಹೆಚ್ಚು ದುಡ್ಡು ಕೊಟ್ಟರೆ, ಎರಡು-ಮೂರು ದಿನಗಳಿಗಾಗುವಷ್ಟು ಭಕ್ಷ್ಯಗಳನ್ನು ಪಾರ್ಸೆಲ್ ಕೊಡುತ್ತಿದ್ದರು! ಏನೇ ಆಗಲಿ, "ಬ್ರಾಹ್ಮಣಂ ಭೋಜನಪ್ರಿಯಂ" ಅಲ್ಲವೇ?!

ಇದರ ಜೊತೆಗೆ ಇನ್ನೊಂದು ಕಾರಣವೂ ಇತ್ತು. ಬೇರೆ ಬೇರೆ ಊರುಗಳಲ್ಲಿದ್ದ  ನಮ್ಮ ಇಬ್ಬರು ದೊಡ್ಡಪ್ಪಂದಿರು ಬೆಂಗಳೂರಿಗೆ ವರ್ಷಕ್ಕೊಮ್ಮೆ ಬರುತ್ತಿದ್ದರು - ನಮ್ಮ ತಾತನ ತಿಥಿಗೆ. ಹೀಗಾಗಿ ನಮ್ಮ ತಾತನ ತಿಥಿ ಎನ್ನುವುದಕ್ಕಿಂತ ಕುಟುಂಬದ 'ಗೆಟ್-ಟುಗೆತರ್' ಎಂದೇ ನಾನು ಭಾವಿಸಿದ್ದೆ. (ಈಗ ಎಲ್ಲರೂ ಒಂದೇ ಊರಿನಲ್ಲಿ ಇರುವುದರಿಂದ ಹಬ್ಬದ ಸಂದರ್ಭಗಳಲ್ಲಿಯೂ  ಗೆಟ್-ಟುಗೆತರ್ ನಡೆಯುತ್ತದೆ.) ನಮ್ಮ ದೊಡ್ಡಪ್ಪ ಪ್ರತೀ ಬಾರಿ  ಊರಿಗೆ ಹೋಗುವ ಮುನ್ನ, ಮನೆಯ ಬಳಿಯಿದ್ದ ವಿ.ಬಿ. ಬೇಕರಿಗೋ ಬಟರ್ ಸ್ಪಾಂಜಿಗೋ ಹೋಗಿ ಬಿಸ್ಕತ್ತು, ಖಾರ ಸೇವೆ ಮೊದಲಾದ ತಿಂಡಿಗಳನ್ನು ಕೊಳ್ಳುತ್ತಿದ್ದರು. ಆ ಸಂದರ್ಭಗಳಲ್ಲಿ ಎಲ್ಲರಿಗಿಂತ ಚಿಕ್ಕವನಾದ ನನ್ನನ್ನೂ ಕರೆದುಕೊಂಡು ಹೋಗಿ ಏನಾದರೂ ಕೊಡಿಸುತ್ತಿದ್ದರು. ಮನೆಯಲ್ಲಿ ಎಷ್ಟೇ ತಿಂದರು, ಇನ್ನೊಬ್ಬರು ಕೊಡಸಿದ ತಿಂಡಿಯೇ ಹೆಚ್ಚು ರುಚಿಯಲ್ಲವೇ? ಈ ಎಲ್ಲದರ ಪರಿಣಾಮವಾಗಿ ನನಗೆ ನಮ್ಮ ತಾತನ ತಿಥಿ ಬಹಳ ಮುಖ್ಯವಾಗಿತ್ತು. 

ತಾತ ತೀರಿಹೋದ ಐದು ವರ್ಷಗಳ ನಂತರ, ನಮ್ಮ ದೊಡ್ಡಪ್ಪಂದಿರು ವರ್ಷಕ್ಕೆ ಎರಡೆರಡು ಬಾರಿ ಬರಲು ಶುರು ಮಾಡಿದರು - ನಮ್ಮ ಅಜ್ಜಿಯ ತಿಥಿಗೋಸ್ಕರ. ಮನೆಯಲ್ಲಿ ಯಾರಾದರೂ ಸತ್ತಾಗ 'ಗರುಡ ಪುರಾಣ'ವನ್ನು ಓದುವುದು ವಾಡಿಕೆ. ನಮ್ಮಪ್ಪ ಸಹ ಓದುತ್ತಿದ್ದರು. ಸಾಮಾನ್ಯವಾಗಿ ಇಂತಹ ಪುಸ್ತಕಗಳನ್ನು ಮಕ್ಕಳ ಕೈಗೆ ಸಿಗದ ಹಾಗೆ ಇಡುತ್ತಾರೆ. ನಾನು ಈ ಪುಸ್ತಕ ಇರುವ ಸ್ಥಳ ನೋಡಿಕೊಂಡು ಕದ್ದು ಓದಿ, ಬೈಸಿಕೊಂಡೆ. ಇದಕ್ಕೆ ಪ್ರಚೋದಿಸಿದ್ದು ಮಾತ್ರ ನಮ್ಮ ಎರಡನೇ ದೊಡ್ಡಪ್ಪ. ವೈಕುಂಠ ಸಮಾರಾಧನೆಯವರೆಗೂ ನಮ್ಮ ಮನೆಯಲ್ಲೇ ಇದ್ದ ಅವರು,  ರಕ್ತ, ಕೀವುಗಳು ತುಂಬಿದ್ದ ವೈತರಣೀ ನದಿಯನ್ನೂ ಪರಲೋಕದ ದಾರಿಯಲ್ಲಿ ಅನುಭವಿಸಬೇಕಾದ ಕಾರ್ಪಣ್ಯಗಳನ್ನೂ ಅತಿ ರೋಚಕವಾಗಿಯೂ ಭಯಂಕರವಾಗಿಯೂ ವರ್ಣಿಸಿದ್ದರು. ಕೆಟ್ಟ ಕುತೂಹಲವನ್ನು ತಡೆಯಲಾರದೆ, ನಾನು ಅದನ್ನು ಪುಸ್ತಕದಲ್ಲೇ ಓದಲು ಪ್ರಯತ್ನಿಸ ಹೋಗಿ ಸಿಕ್ಕಿಬಿದ್ದೆ. ಅದ್ಯಾಕೋ, ಈವರೆಗೂ ಆ ಆಸೆ ಫಲಕಾರಿಯೇ ಆಗಿಲ್ಲ. 

ಸ್ವಲ್ಪ ತಿಳಿವಳಿಕೆ ಬಂದ ಮೇಲೆ, ತಿಥಿ ಮಾಡುವುದು ನಿರರ್ಥಕ ಎಂದು ಅನಿಸತೊಡಗಿತು. ಈ ವಿಚಾರವಾಗಿ ಮನೆಯಲ್ಲಿ ಹಲವಾರು ಬಾರಿ ಚರ್ಚೆಗಳೂ ನಡೆದಿವೆ. 
ಪ್ರತೀ ಬಾರಿಯೂ ಅದದೇ ಬ್ರಾಹ್ಮಣರನ್ನು ಕರೆದು ತಿನ್ನಿಸುವ ಬದಲು ನಿಜಕ್ಕೂ ಅಗತ್ಯವಿದ್ದವರಿಗೆ ಅನ್ನದಾನ ಮಾಡುವುದು ಒಳ್ಳೆಯದಲ್ಲವೇ? ಆ ಬ್ರಾಹ್ಮಣರೋ! ಊಟದ ಜೊತೆಗೆ ಪಂಚೆ ಶಲ್ಯಗಳನ್ನು ಕೊಟ್ಟರೆ, ದಕ್ಷಿಣೆಯಾಗಿ ಕೊಟ್ಟ ಹಣದಲ್ಲಿ ಚೌಕಾಶಿ ಮಾಡುತ್ತಾರೆ. 

ತಿಥಿ ಮಾಡುವಾಗ ಕರ್ತೃಗಳು ಉಪವಾಸವಿರಬೇಕು. ಆದರೆ ನಮ್ಮ ದೊಡ್ಡಪ್ಪ ಒಬ್ಬರು ಬರೀ ಅವಲಕ್ಕಿಯನ್ನೋ ಮೊಸರವಲಕ್ಕಿಯನ್ನೋ ತಿನ್ನುತ್ತಾರೆ. ಅವಕ್ಕೆ ದೋಷವಿಲ್ಲವಂತೆ. ಈ ಶಾಸ್ತ್ರಗಳನ್ನು ರಚಿಸಿದವರು ಇಂತಹ "ಟೆಕ್ನಿಕಲ್ ಲೂಪ್ಹೋಲ್"ಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ರಚಿಸಿದರೋ ಏನೋ ಎಂದು ಅನುಮಾನವಾಗುತ್ತದೆ! 

ನಮ್ಮ ತಾತನ ತಿಥಿ  ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಇರುತ್ತದೆ. ಅದೇ ಸಮಯಕ್ಕೆ ಸಾಮಾನ್ಯವಾಗಿ ಭಾರತದ ಯಾವುದಾದರೂ ಕ್ರಿಕೆಟ್ ಸರಣಿ ನಡೆಯುತ್ತಿರುತ್ತದೆ. ಇಂಥ ಸಂದರ್ಭದಲ್ಲಿ, ತಿಥಿ ಮಾಡಿಸುವ ಜೋಯಿಸರು, ಬ್ರಾಹ್ಮಣಾರ್ಥಕ್ಕೆ ಬಂದವರಾದಿಯಾಗಿ ಎಲ್ಲರೂ ಬಂದು ಸ್ಕೋರ್ ಕೇಳಿ ಹೋಗುತ್ತಾರೆ. 

ವಯಸ್ಸಿನ ಜೊತೆಗೆ ಹಸಿವು ತಡೆಯುವ ಶಕ್ತಿಯೂ ಕಡಿಮೆಯಾಗುತ್ತದೆ ಅನಿಸುತ್ತದೆ. ಏಕೆಂದರೆ, ಪ್ರತೀ ಬಾರಿಯೂ ಯಾವುದೋ ಒಂದು ಕಾರಣಕ್ಕೆ ನಮ್ಮಪ್ಪ ದೊಡ್ಡಪ್ಪಂದಿರಿಂದ ಗೊಣಗಾಟ - ಕಿರುಚಾಟಗಳು ನಡೆದೇ ನಡೆಯುತ್ತವೆ. 

ಇಷ್ಟಾದರೂ ಪ್ರತಿ ವರ್ಷ ತಿಥಿ ಮಾಡಿಯೇ ಮಾಡುತ್ತಾರೆ. ಇಲ್ಲದಿದ್ದರೆ ತಾತ - ಅಜ್ಜಿಯರ ಆತ್ಮಕ್ಕೆ ಶಾಂತಿ ಇರುವುದಿಲ್ಲ ಎಂದು ಇವರುಗಳ ನಂಬಿಕೆ. 

ಮನೆಯಿಂದ ಹೊರಗಿರುವ ನನಗೆ ತಾತನ ತಿಥಿ ತಪ್ಪುತ್ತದೆ. ಆ ದಿನದಂದು ಮನೆಯಲ್ಲಿ ಊಟಕ್ಕೆ ಕುಳಿತ ನಂತರವೇ ನಾನು ಊಟ ಮಾಡಿದ ಸಂದರ್ಭವೂ ಇದೆ. ಆನಂತರ "ಅದೇಕೆ ಹಾಗೆ ಮಾಡಿದೆ?" ಎಂದು ನನ್ನನ್ನು ನಾನೇ ಕೇಳಿಕೊಂಡದ್ದೂ ಇದೆ.

ಮನೆಗೆ ಹೋದಾಗಲೆಲ್ಲ ನಾನು ಅಜ್ಜಿಯ ತಿಥಿಗೆ ಕಾಯುತ್ತೇನೆ - ವಡೆ-ಪಾಯಸದ ಆಸೆಯಲ್ಲಿ!  




Saturday, January 7, 2017

ನಿರ್ಣಯ

ಕಳೆದ ಸಲ ಊರಿಗೆ ಹೋಗಿದ್ದಾಗಿನ ಮಾತು. ಊಟದ ನಂತರ ನಮ್ಮ ಮಾವನೊಡನೆ ಜಗುಲಿಯ ಮೇಲೆ ಕುಳಿತು ಹರಟುತ್ತಿದ್ದೆ. ನಮ್ಮನ್ನು ನೋಡಿದ ವೆಂಕಟೇಶಬಾಬು ಬಂದು ಸ್ವಲ್ಪ ದೂರದಿಂದಲೇ "ನಮಸ್ಕಾರ ಬುದ್ದಿ" ಎನ್ನುತ್ತಾ ನಿಂತ. ಅಷ್ಟು ದೂರದಿಂದಲೇ ಅವನು ಕುಡಿದಿದ್ದ ಎಂದು ಗೊತ್ತಾಗುತ್ತಿತ್ತು. ವೆಂಕಟೇಶಬಾಬು ನಮಗೇನು ಹೊಸಬನಲ್ಲ. ನನಗೆ ನೆನಪಿದ್ದಾಗಿನಿಂದಲೂ ಅವನು ನಮ್ಮ ಮಾವನ ಮನೆಯ ಕೆಲಸಗಳಲ್ಲಿ ನೆರವಾಗುತ್ತಿದ್ದ. ನನ್ನ ಸೋದರ ಸಂಬಂಧಿಗಳೆಲ್ಲ, ಅವನ ವಯಸ್ಸನ್ನು ಲೆಕ್ಕಿಸದೆ, ಅವನನ್ನು "ಹೋಗೋ", "ಬಾರೋ" ಎಂದೇ ಮಾತಾಡಿಸುತ್ತಿದ್ದರು.  ಅವನೂ ಎಂದು ಎದುರಾಡಿರಲಿಲ್ಲ. ಆದರೂ, ನಾನು "ಬನ್ನಿ", "ಹೋಗಿ" ಎಂದೇ ಕೂಗುತ್ತಿದ್ದೆ. ಕುಡಿದ ಅಮಲಿನಲ್ಲಿ ಇಂಗ್ಲಿಷ್ ಮಾತಾಡುತ್ತಾನೆಂದು ಪ್ರತೀತಿ ಇತ್ತು ಅವನ ಬಗ್ಗೆ. ಆದರೆ ನಾನು ಯಾವತ್ತೂ ಕೇಳಿರಲಿಲ್ಲ. ಅವನ, ಮಾವನ ನಡುವಿನ ಮಾತಿನಲ್ಲಿ ಎಲ್ಲಾದರೂ ಇಂಗ್ಲಿಷ್ ಮಾತಾಡಬಹುದೇನೋ ಎಂದು ನಾನು ಗಮನಿಸುತ್ತಾ ಕುಳಿತೆ. ಅವನ ಬಾಯಿಂದ ಹೊರಟ  ಹೆಂಡದ ದುರ್ನಾತ ಬಿಟ್ಟರೆ ಬೇರೇನೂ ಗಿಟ್ಟಲಿಲ್ಲ. "ಏನ್ರಿ ಬಾಬು, ನಿಮಗೆ ಮದ್ವೆ ಗಿದ್ವೆ ಆಗಿದ್ಯೋ?" ಎಂದು ಅಮಾಯಕವಾಗಿ ಕೇಳಿದೆ, ಮಾತಿಗಿಳಿಯುತ್ತಾ. ಅದೇನಾಯಿತೋ, ಬಾಬು ಎದ್ದು ಹೊರಟೇ ಬಿಟ್ಟ. "ಏನಾಯಿತು?" ಎಂದು ಮಾವನ್ನ ಕೇಳಿದೆ. ಆಗ ಅವರು ಬಾಬುವಿನ ಕಥೆ ಹೇಳಿದರು.

ಚಿಕ್ಕವನಿದ್ದಾಗಿನಿಂದಲೂ ಬಾಬು ನಮ್ಮ ಮನೆಯ ಸಣ್ಣ ಪುಟ್ಟ ಕೆಲಸಗಳಿಗೆ ಆಳಾಗಿ ದುಡಿಯುತ್ತಿದ್ದ. ಅಷ್ಟೇ ಅಲ್ಲ, ಮನೆಯಲ್ಲಿ ಯಾವುದೇ ಮದುವೆ, ಮುಂಜಿ, ತಿಥಿ-ವೈಕುಂಠಗಳು ನಡೆದರೂ, ಅಲ್ಲಿ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ಬಾಬು ಊರಿನಲ್ಲೇ ಅವರಿವರ ಬಳಿಯೂ ಕೆಲಸ ಮಾಡುತ್ತಾ ತನ್ನದು ಎನ್ನುವ ಒಂದು ಸಣ್ಣ ಮನೆಯನ್ನೂ ಬಾಡಿಗೆಗೆ ಮಾಡಿಕೊಂಡ. ಅವನ ಮದುವೆಯಲ್ಲಿ ನಮ್ಮ ಮಾವನೇ ಹೆಣ್ಣಿಗೆ ತಾಳಿ ಮಾಡಿಸಿ ಕೊಟ್ಟರು . ಮದುವೆಯ ನಂತರ ಬಾಬು ಅವನ ಹೆಂಡತಿ ಮಾದೇವಿಯೊಂದಿಗೆ ಬಂದು, ನಮ್ಮ ಅಜ್ಜಿಯ ಹಾಗು ಅತ್ತೆ - ಮಾವನ ಆಶೀರ್ವಾದ ಪಡೆದು ಹೋಗಿದ್ದ. ಮೂರ್ನಾಲ್ಕು ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು, ಮಗುವಾಗಿರಲಿಲ್ಲ ಎನ್ನುವುದೊಂದು ಬಿಟ್ಟರೆ.

ಅದೊಂದು ಸಲ, ಬಾಬುವಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು - ಯಾವುದೋ ದೊಡ್ಡ ಅಪಾರ್ಟ್ಮೆಂಟ್ ನಿರ್ಮಾಣದ ಕಾಮಗಾರಿ. ಊರಿನಲ್ಲಿ ಅವನು ಮಾಡುತ್ತಿದ್ದ ಕೆಲಸಗಳಿಗಿಂತ ಹೆಚ್ಚಿನ ಸಂಬಳ ಸಿಕ್ಕುತ್ತದೆ ಎಂದು ಅವನೂ ಹೊರಟ, ಮಾದೇವಿಯನ್ನು ಊರಿನಲ್ಲೇ ಬಿಟ್ಟು. ಮೊದಲ ತಿಂಗಳು ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ. ಆಮೇಲೆ, "ಸುಮ್ಮನೆ ಖರ್ಚು ಯಾಕೆ?" ಎಂದು ತಿಂಗಳ ಮೊದಲಿನಲ್ಲಿ ಬಂದು ಅವಳ ಕೈಗೆ ಸ್ವಲ್ಪ ದುಡ್ಡು ಕೊಟ್ಟು ಹೋಗುತ್ತಿದ್ದ. ಸುಮಾರು ಆರೇಳು ತಿಂಗಳ ನಂತರ ಬಾಬು ಊರಿಗೆ ವಾಪಸ್ಸಾದ, ಬೆಂಗಳೂರಿನ ಕೆಲಸ ಮುಗಿದ ಮೇಲೆ.

ಹೋಗುವ ಮೊದಲು ಆಗೊಮ್ಮೆ ಈಗೊಮ್ಮೆ ಕುಡಿಯುತ್ತಿದ್ದ ಬಾಬು, ಈಗ ದಿನವೂ ಕುಡಿಯಲು ಶುರು ಮಾಡಿದ. ಅಷ್ಟೇ ಆಗಿದ್ದರೆ ಮಾದೇವಿಯೂ ಸಹಿಸುತ್ತಿದ್ದಳೋ ಏನೋ. ಆದರೆ, ಕುಡಿದ ಅಮಲಿನಲ್ಲಿ ಅಕ್ಕಪಕ್ಕದ ಮನೆಯವರಿಗೆ ಕೇಳುವಂತೆ "ನನಗೆ ಒಂದು ಮಗು ಹೆತ್ತು ಕೊಡಕ್ಕೆ ಆಗಲ್ವೇನೇ?" ಎಂದು ಬಯ್ಯಬಾರದ ಪದಗಳಲ್ಲಿ ಬಯ್ಯಲು ಶುರು ಮಾಡಿದ. ರೋಸಿ ಹೋದ ಮಾದೇವಿ, ನಮ್ಮ ಮನೆಯ ಹಿತ್ತಲಿನಲ್ಲಿ ಕುಕ್ಕರುಗಾಲಲ್ಲಿ ಕುಳಿತು  ಅವಳ ಗೋಳಿನ ಕಥೆಯನ್ನು ನಮ್ಮ ಅಜ್ಜಿ, ಅತ್ತೆಗೆ ಹೇಳಿದಳಂತೆ. ಇವರುಗಳು ನಮ್ಮ ಮಾವನಿಗೆ ಹೇಳಿದರಂತೆ, ಬಾಬುವಿಗೆ ತಿಳಿಹೇಳಲು. ನಮ್ಮ ಮಾವನೂ  ಅವನನ್ನು ಕರೆದು ಚೆನ್ನಾಗಿ ಬಯ್ದರು. ಅವರ ಭಯಕ್ಕೋ ಏನೋ, ಸ್ವಲ್ಪ ದಿನಗಳ ಕಾಲ ಬಾಬು ಕುಡಿಯುವುದನ್ನು ಬಿಟ್ಟನಂತೆ; ಹೆಂಡತಿಯನ್ನು ಹೀಯಾಳಿಸುವುದನ್ನು ಕೂಡ. ಆದರೆ, ಅವನು ಕುಡಿಯುವುದನ್ನು ಬಿಟ್ಟರೂ, ಹೆಂಡ ಅವನನ್ನು ಬಿಡಲಿಲ್ಲ. ಅವನ ಚಟ ಮತ್ತೆ ಶುರುವಾದಾಗ, ಮಾದೇವಿಗೆ ದಿಕ್ಕೇ ತೋಚದಾಯಿತು. ಆಗ ಅವಳಿಗೆ ಸಾಂತ್ವನ ಹೇಳಿದವನೇ ಎದುರು ಮನೆಯ ಶೇಖರ.

ಶೇಖರನಿಗೆ ಈಗೆರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಊರ ಹಬ್ಬಕ್ಕೆಂದು ಹೋದ ಹೆಂಡತಿ ಅದ್ಯಾಕೋ ವಾಪಸ್ಸು ಬರಲೇ ಇಲ್ಲ. ಇವನು ವರದಕ್ಷಿಣೆಗಾಗಿ ಗೋಳುಹೊಯ್ದುಕೊಳ್ಳುತ್ತಿದ್ದನೆಂದೂ, ಹೆಂಡತಿಗೆ ಹೊಡೆಯುತ್ತಿದ್ದನೆಂದೂ ಅಲ್ಲಲ್ಲಿ  ಗುಸುಗುಸು  ಹಬ್ಬಿತ್ತು. ಇಷ್ಟಾಗಿಯೂ, ಮಾದೇವಿಗೆ ಇವನೊಡನೆ ಸ್ನೇಹವಾಯಿತು. ಕ್ರಮೇಣ, ಸ್ನೇಹ ಸಂಬಂಧವಾಯಿತು. ಇವರ ಬಗ್ಗೆ ಅವರ ಬೀದಿಯ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರೂ, ಬಾಬುವಿಗೆ ಹೇಳುವ ಧೈರ್ಯ ಯಾರಿಗೂ ಮೂಡಲಿಲ್ಲ. ನಮ್ಮ ಮಾವನಿಗೆ ತಿಳಿದೇ ಇರಲಿಲ್ಲವಂತೆ. ತಿಳಿದಿದ್ದರೆ, ಮಾದೇವಿಯನ್ನು ಕರೆದು ತಿಳಿಹೇಳುತ್ತಿದ್ದರೋ ಏನೋ.

ಶೇಖರ ಮಾದೇವಿಯರ ಸಂಬಂಧ ಎಷ್ಟು ಗಾಢವಾಯಿತೆಂದರೆ, ಬಾಬು ಬೆಂಗಳೂರಿಗೆ ಅಥವಾ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದಾಗ, ಶೇಖರ ಬಾಬುವಿನ ಮನೆಯಲ್ಲೇ ಇರುತ್ತಿದ್ದ. ಹೀಗಿರುವಾಗ, ಒಂದು ದಿನ, ಬೆಂಗಳೂರಿಗೆ ಹೋಗಿದ್ದ ಬಾಬು ಇದ್ದಕ್ಕಿದ್ದಂತೆ ವಾಪಸ್ಸು ಬಂದ, ಮಾದೇವಿಗೂ ತಿಳಿಸದೆಯೇ. ಅದು ಹೇಗೆ ಬೀದಿಯವರೆಲ್ಲರಿಗೂ ತಿಳಿಯಿತೋ ಏನೋ? ಈ ದೃಶ್ಯವನ್ನು ನೋಡಲು ಎಲ್ಲರೂ ಅವರವರ ಮನೆಯ ಬಾಗಿಲುಗಳ ಮುಂದೆ ಹಾಜರಾದರು. ಮನೆಗೆ ಹೋದ ಬಾಬು ಶೇಖರನನ್ನು ಕಂಡಾಗ ಒಂದು ಮಾತೂ ಆಡಲಿಲ್ಲ. ಶೇಖರ ತಲೆಬಗ್ಗಿಸಿ ಹೊರನಡೆದು ತನ್ನ ಮನೆ ಸೇರಿಕೊಂಡ. ಹೊಡೆದಾಟ ಬಡಿದಾಟಗಳನ್ನು ನಿರೀಕ್ಷಿಸಿದ್ದ  ಜನ ನಿರಾಸೆಯಿಂದ ಮನೆಯೊಳಕ್ಕೆ ಹೋದರು.

ಎರಡು ಮೂರು ದಿನಗಳ ನಂತರ, ವೆಂಕಟೇಶಬಾಬು ಮಾದೇವಿಯನ್ನು ಕರೆದುಕೊಂಡು ಹೋಗಿ ಶೇಖರನ ಮನೆಯಲ್ಲಿ ಬಿಟ್ಟು ಬಂದ. ಅಷ್ಟೇ ಅಲ್ಲ, ಕೈಗೆ ಸ್ವಲ್ಪ ಹಣವನ್ನೂ ಕೊಟ್ಟನಂತೆ. ಇದೆಲ್ಲಾ ಆಗಿ ನಾಲ್ಕು ವರ್ಷಗಳಾಗಿವೆ. ಅವರ ನಡುವೆ ಅದೇನು ನಿರ್ಣಯವಾಯಿತೋ ಗೊತ್ತಿಲ್ಲ. ಈಗಲೂ, ಬಾಬುವಿಗೆ ಹುಷಾರಿಲ್ಲದಿದ್ದಾಗ ಅಥವಾ ಬೇರೆ ಅನಿವಾರ್ಯ ಸಂದರ್ಭದಲ್ಲಿ, ಮಾದೇವಿಯೇ ಅಡುಗೆ ಊಟಗಳನ್ನು ನೀಡುತ್ತಾಳೆ. ಅಷ್ಟೇ ಅಲ್ಲ, ಪ್ರತಿ ದೀಪಾವಳಿಗೂ ಬಾಬು ಅವಳಿಗೆ ಹೊಸ ಸೀರೆಯೊಂದನ್ನು ಕೊಡಿಸುತ್ತಾನೆ. ಅಲ್ಲದೆ, ಅವಳ ಮೂರು ವರ್ಷದ ಮಗನಿಗೆಂದೇ ಪಟಾಕಿಗಳನ್ನೂ ತರುತ್ತಾನಂತೆ.

ಮಾವ ಇಷ್ಟು ಕಥೆ ಹೇಳಿ ಮುಗಿಸುವ ಹೊತ್ತಿಗೆ ನಮ್ಮ ಅತ್ತೆ ಬಂದು ಕರೆದರು ಎಂದು ಎದ್ದು ಒಳಗೆ ಹೋದೆವು. ಬಾಬು ಹಾಗೇಕೆ ಮಾಡಿದ ಎಂದು ಯೋಚಿಸುತ್ತಾ ಮಲಗಿದ ನನಗೆ ಮಾರನೆಯ ದಿನ ಅವನನ್ನು ಮಾತಾಡಿಸುವ ತವಕ ಉಂಟಾಯಿತು. ಯಾವುದೊ ಕಾರಣಕ್ಕೆ ಮನೆಗೆ ಬಂದ ಬಾಬುವನ್ನು ಅವನು ಹೊರಹೋಗುವಾಗ ಯಾರಿಗೂ ಕಾಣದಂತೆ ನಿಲ್ಲಿಸಿ ಕೇಳಿಯೇಬಿಟ್ಟೆ. ಅವನು ನಗುತ್ತ "ನೋಡಿ ಬುದ್ದಿ, ಮಾದೇವಿ ನನ್ನ ಜೊತೆ ಇದ್ದಿದ್ರೆ, ನಾವು ಮೂರೂ ಜನ ನೆಮ್ಮದಿಯಾಗಿ ಇರಾಕಾಗ್ತಿರ್ಲಿಲ್ಲ. ಅವಳನ್ನ ಮದ್ವೆಯಾಗಿದ್ದು ಅವಳನ್ನ ಸಂತೋಷವಾಗಿ ನೋಡ್ಕೋತೀನಿ ಅಂತಲ್ವಾ? ನನ್ನ ಕೈಯಲ್ಲಿ ಅದು ಆಗಲ್ಲ ಅಂತ ಅವಳ ಜೀವನ ಯಾಕೆ ಹಾಳು ಮಾಡಬೇಕು, ಹೇಳಿ? ಅದ್ಕೆ ಕರ್ಕೊಂಡು ಹೋಗಿ ಬಿಟ್ಟೆ. ಅವ್ಳಿಗೆ ಯಾವ ಉಪಕಾರಾನೂ ಮಾಡಿಲ್ಲ ನಾನು. ಅವಳ ಇಷ್ಟ ಹೇಗೋ ಅವಳು ಹಾಗೆ ಬದ್ಕೋದು ನ್ಯಾಯ. ಮಾತಾಡೋರು ಎಷ್ಟು ದಿನ ಅಂತ ಮಾತಾಡಾರು? ಕಡೇಲಿ, ನಮ್ಮ ಬದುಕು ನಾವೇ ಬಾಳ್ಬೇಕು, ಅಲ್ವಾ? ಬರ್ತೀನಿ ಬುದ್ದಿ" ಎನ್ನುತ್ತಾ ತನ್ನ ಕೆಲಸಕ್ಕೆ ಹೋದ.