ಹೋದ ಮಂಗಳವಾರ ಮನೆಗೆ ಕರೆ ಮಾಡಿದ್ದಾಗ, ಇತರೆ ಹಲವಾರು ವಿಚಾರಗಳ ಜೊತೆಗೆ ಅಣ್ಣ ಮೂರ್ತಿಯವರು ತೀರಿಹೋದ ವಿಚಾರವನ್ನೂ ಹೇಳಿದ. 'ಅಯ್ಯೋ, ಪಾಪ' ಎಂದು ನಾಮ್-ಕೆ-ವಾಸ್ತೆ ಒಂದೆರಡು ಕನಿಕರದ ಮಾತುಗಳನ್ನಾಡಿ ಮಾತು ಬೇರೆಡೆಗೆ ಹೊರಳಿತು. ಆಗ ಬಾಧಿಸದ ಅವರ ಸಾವಿನ ವಿಚಾರ ಆನಂತರ ಅದೇಕೋ ಕೊರೆಯ ತೊಡಗಿತು. ಅವರೇನು ತೀರಾ ಹತ್ತಿರದ ಸ್ನೇಹಿತರಲ್ಲ. ಸಂಬಂಧಿಯಂತೂ ಅಲ್ಲವೇ ಅಲ್ಲ. ಹೀಗಿದ್ದರೂ ಯಾಕೆ ಬಾಧಿಸುತ್ತಿದೆ ಎಂದು ಅರ್ಥವಾಗದೇ, ಕ್ಯಾಂಟೀನಿನಲ್ಲಿ ಕಾಫಿ ಹೀರುತ್ತಾ ಯೋಚಿಸತೊಡಗಿದೆ.
ರಾಮಮೂರ್ತಿಯವರು ಎಂದ ಕೂಡಲೇ ಅವರ ರೂಪಕ್ಕಿಂತ ಮೊದಲು, ಮೂಗಿನಲ್ಲಿ ಮಾತಾಡುತ್ತಿದ್ದ ಅವರ ಧ್ವನಿ ನೆನಪಾಗುತ್ತಿತ್ತು. ಅದೇ ಧ್ವನಿಯಲ್ಲಿ ತಕ್ಕ ಮಟ್ಟಿಗೆ ಸುಶ್ರಾವ್ಯವಾಗಿ ಹಾಡುತ್ತಿದ್ದರು ಕೂಡ. ಒಂದು ಕಾಲದಲ್ಲಿ ಕರ್ನಾಟಕದ ರಣಜಿ ತಂಡದಲ್ಲಿ ಆಡಿದ್ದರಂತೆ. ಅವರಿಗೆ ಮದುವೆಯಾಗಿರಲಿಲ್ಲವೆಂದೂ, ಅವರ ಸೋದರ ಸಂಬಂಧಿಗಳು ಮೋಸ ಮಾಡಿ ಪಿತ್ರಾರ್ಜಿತವಾಗಿ ಬಂದಿದ್ದ ಮನೆ ಕಸಿದುಕೊಂಡರೆಂದು ಅಪ್ಪ, ಮಾವ ಇವರುಗಳು ಎಂದೋ ಇನ್ಯಾವುದೋ ಸಂಭಾಷಣೆಯಲ್ಲಿ ಹೇಳಿದ್ದು ನೆನಪಾಯಿತು.
ನನಗೆ ನೆನಪಿದ್ದಾಗಿನಿಂದಲೂ ಮೂರ್ತಿಯವರದ್ದು ಮುಕ್ಕಾಲು ಬೋಳುತಲೆ. ಇದ್ದ ಸ್ವಲ್ಪ ಬಿಳಿಕೂದಲನ್ನು ಚೆನ್ನಾಗಿ ಬಾಚಿ, ಬಿಸಿಲಿನಲ್ಲಿ ಹೊಳೆಯುವಂತೆ ಬುರುಡೆಗೆ ಎಣ್ಣೆ ತಿಕ್ಕಿ, ನಮ್ಮ ಮನೆಯಿದ್ದ ರಸ್ತೆಯ ಮೂಲಕವಾಗಿ ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಖಾದಿ ಜುಬ್ಬಾ ಪಂಚೆಯೊಂದಿಗೆ ಶಲ್ಯ ಹೊದ್ದು, ದಾರಿಯುದ್ದಕ್ಕೂ "ನಾನು ಕ್ರಿಕೆಟ್ ಆಟ ಆಡೋದಕ್ಕೆ..." ಎಂದು ಸ್ವರಚಿತ ಹಾಡೊಂದನ್ನು ರಾಗವಾಗಿ ಹಾಡುತ್ತಿದ್ದರು. ಆ ಹಾಡು ಕೇಳಲಿಕ್ಕೆಂದೇ ಎಷ್ಟೋ ಬಾರಿ ಮನೆಯಿಂದ ಹೊರಗೆ ಬಂದು ನಿಂತಿರುತ್ತಿದ್ದೆ. ದೇವಸ್ಥಾನದಲ್ಲಿ ಅರ್ಚನೆ-ಅಭಿಷೇಕಗಳ ಚೀಟಿ ಬರೆಯುತ್ತಿದ್ದ ಅವರು, ನಾನು ನಮ್ಮ ಮಾವನೊಂದಿಗೆ ಪ್ರತಿ ಮಂಗಳವಾರ ದೇವಸ್ಥಾನಕ್ಕೆ ಹೋದಾಗ, ಕರೆದು ತೆಂಗಿನಕಾಯಿ ಚೂರುಗಳನ್ನೋ, ಬಾಳೆಹಣ್ಣೊಂದನ್ನೋ ಕೊಡುತ್ತಿದ್ದರು. ಇದೆಲ್ಲ ಸುಮಾರು ವರ್ಷಗಳ ಹಿಂದಿನ ಮಾತು.
ಹೀಗಿರುವಾಗ, ಇದ್ದಕ್ಕಿದಂತೆ ಮೂರ್ತಿಯವರು ದೇವಸ್ಥಾನದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದರು. ಕಾಯಿ ಚೂರು ಬಾಳೆಹಣ್ಣುಗಳು ತಪ್ಪಿ ಹೋಗುವ ಆತಂಕದಲ್ಲಿ ನಾನು ಮನೆಗೆ ಬಂದಿದ್ದ ಅತ್ತೆ, ಮಾವನನ್ನು ಮೂರ್ತಿಯವರ ಬಗ್ಗೆ ಕೇಳಿದೆ. "ಲೆಕ್ಕದಲ್ಲಿ ತಪ್ಪು ಮಾಡಿದರಂತೆ" ಎಂದು ಹೇಳಿ ಮಾತು ತೇಲಿಸಿದ ಅವರು, ಆನಂತರ ನನಗೆ ಏನೂ ತಿಳಿಯದ ವಯಸ್ಸು ಎಂದು ಭಾವಿಸಿ ನನ್ನ ಮುಂದೆಯೇ ಒಳಕಾರಣವನ್ನು ಅಪ್ಪ ಅಮ್ಮನೊಡನೆ ಚರ್ಚಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅರ್ಚನೆಗಾಗಿ ಬರೆಸಲು ಹೆಂಗಸರು ಬಂದಾಗ ಮೂರ್ತಿಯವರು ಬೇಕೆಂದೇ ತಡ ಮಾಡುತ್ತಿದ್ದರಂತೆ. ಅಗತ್ಯಕ್ಕಿಂತ ಹೆಚ್ಚಿನ ಸಲಿಗೆಯಿಂದ ಅವರೊಡನೆ ಮಾತಾಡುತ್ತಿದ್ದರಂತೆ. ಇದನ್ನು ಅದ್ಯಾರೋ ದತ್ತಿಯ ಗಮನಕ್ಕೆ ತಂದು, ಆಡಳಿತ ಮಂಡಳಿಯವರು ಅವರನ್ನು ವಜಾಗೊಳಿಸಿದರು ಎಂದು ನಮ್ಮ ಮಾವನಿಗೆ ಪರಿಚಯವಿದ್ದ ಅರ್ಚಕರೊಬ್ಬರು ತೀರ್ಥ, ಪ್ರಸಾದಗಳನ್ನು ವಿತರಿಸುವಾಗ ಹೇಳಿದರಂತೆ.
ಇದ್ದ ಪ್ರಾಯಶಃ ಒಂದೇ ಒಂದು ಆದಾಯದ ಮೂಲವನ್ನು ಕಳೆದುಕೊಂಡ ಮೇಲೆ ಮೂರ್ತಿಯವರು ಕಳೆಗುಂದುತ್ತಾ ಬಂದರು. ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲೂ, ಶನಿವಾರಗಳಂದು ಹನುಮಂತನಗರದ ನರಸಿಂಹಸ್ವಾಮಿ ದೇವಸ್ಥಾನದಲ್ಲೂ, ಸಂಕಷ್ಟಹರ ಚತುರ್ಥಿಯ ದಿನ ದೊಡ್ಡ ಗಣೇಶನ ಗುಡಿಯಲ್ಲೂ ಮೂರ್ತಿಯವರು ಕಾಣುತ್ತಿದ್ದರು. ಎಷ್ಟೇ ಜನರಿದ್ದರೂ, ಅವರ ಮಾತಿನ ಸದ್ದು ಮೀರಿ, ಮೂರ್ತಿಯವರು "ವಾತಾಪಿ ಗಣಪತಿಮ್ ಭಜೇ..." ಎಂದೋ "ಶ್ರೀಮನ್ನಾರಾಯಣ..." ಎಂದೋ ಹಾಡುತ್ತಿದ್ದದ್ದು ಕೇಳುತ್ತಿತ್ತು. ದೇವಸ್ಥಾನಕ್ಕೆ ಬಂದ ಜನ ಮೂರ್ತಿಯವರ ಶಲ್ಯದೊಳಗೆ ಒಂದು ರೂಪಾಯಿ, ಎರಡು ರೂಪಾಯಿ ಹಾಕಿದಾಗ ಅವರು ಕೈಯೆತ್ತಿ ಮುಗಿಯುತ್ತಿದ್ದದ್ದು ನೆನೆಸಿಕೊಂಡರೆ ಒಂದು ತೆರನಾದ ಸಂಕಟವಾಗುತ್ತದೆ. ಅವರೊಡನೆ ಮಾತಾಡಿ ಬರುತ್ತೇನೆ ಎಂದು ಹೇಳಿದಾಗ, ಅಮ್ಮ ಕಾರಣ ಹೇಳದೆಯೇ, "ಆ ಮುದುಕನ ಜೊತೆ ನಿಂದೇನು ಮಾತು?!" ಎಂದು ಗದರಿ, ಎಳೆದುಕೊಂಡು ಬರುತ್ತಿದ್ದರು. ರಸ್ತೆಯಲ್ಲಿ ಒಂದೆರಡು ಬಾರಿ ಕಂಡಾಗ ಅವರನ್ನು ನೋಡಿ ಪರಿಚಯದ ನಗೆ ನಕ್ಕೆನೇ ಹೊರತು, ಹೋಗಿ ಮಾತಾಡಲಿಲ್ಲ - ಅಮ್ಮನಿಗೆ ಹೆದರಿ.
ಆನಂತರದ ವರ್ಷಗಳಲ್ಲಿ ಮೂರ್ತಿಯವರ ನೆನಪುಗಳು ಮಾಸಲು ಆರಂಭವಾಯಿತು ಎಂದು ಕಾಣುತ್ತದೆ. ನನ್ನನ್ನು ಕಂಡರೆ ಅಪರಿಚಿತರಂತೆ ಕಾಣುತ್ತಿದ್ದರು. ತಮ್ಮ ಬಗ್ಗೆಯೂ ಅವರಿಗೆ ನಿಗಾ ಕಡಿಮೆಯಾಗಿರಬೇಕು. ಕೊಳಕಾದ ಜುಬ್ಬವನ್ನೇ ಧರಿಸುತ್ತಾ, ಇದ್ದ ಸ್ವಲ್ಪ ಕೂದಲು ಕೆದರಿದ್ದರೂ ಬಾಚದೆ ಓಡಾಡುತ್ತಿದ್ದರು. ಇಷ್ಟಾದರೂ, ಮತ್ತೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ, ನಾನು ಕಂಡಂತೆ, ಕಾಲಿಡಲಿಲ್ಲ. ನಮ್ಮೊಡನೆ ಅಷ್ಟು ಆತ್ಮೀಯವಾಗಿದ್ದ ಅವರು ಹೀಗೆ ಹುಚ್ಚನಂತೆ ಓಡಾಡುತ್ತಿರುವಾಗಲೂ ನಮ್ಮ ಮನೆಯವರಾಗಲಿ ಅಥವಾ ಅವರಿಗೆ ಪರಿಚಯವಿದ್ದ ಬೇರೆಯವರಾಗಲಿ ಯಾಕೆ ಏನೂ ಸಹಾಯ ಮಾಡಲಿಲ್ಲ ಎಂದು ನನಗೆ ಅರ್ಥವಾಗಿಲ್ಲ.
ಸ್ವಲ್ಪ ತಿಳಿವಳಿಕೆ ಬಂದಾಗಿನಿಂದ ಹಲವು ಬಾರಿ ಮೂರ್ತಿಯವರನ್ನು ಕೆಲಸದಿಂದ ತೆಗೆದು ಹಾಕಿದ ಘಟನೆಯ ಕುರಿತಾಗಿ, ನಾನು ಗ್ರಹಿಸಿಕೊಂಡಿರುವ ರಾಮಮೂರ್ತಿಯವರ ಕುರಿತಾಗಿ ಯೋಚಿಸಿದ್ದೇನೆ. ನನಗೆ ಆ ಆರೋಪದಲ್ಲಿ ತಿರುಳು ಕಂಡಿಲ್ಲ. ಅವರ ನೆನಪಿಗೆ ನ್ಯಾಯವೊದಗಿಸಿದ ಆತ್ಮತೃಪ್ತಿಯೊಂದನ್ನು ಬಿಟ್ಟರೆ ನನ್ನ ಈ ತೀರ್ಪಿನಿಂದ ಯಾರಿಗೆ ಏನಾಗಬೇಕಿದೆ? ಎಂದುಕೊಳ್ಳುತ್ತಾ ಕಾಫಿ ಲೋಟವನ್ನು ಬುಟ್ಟಿಗೆ ಎಸೆದು ರೂಮಿಗೆ ಬಂದೆ.
No comments:
Post a Comment