'ಅದೇಕೋ ಬೆಳಗ್ಗೆ ಪೇಪರಿನಲ್ಲಿ ಓದಿದ ಆ ಸಾಲುಗಳು ತುಂಬ ಕಾಡುತ್ತಿವೆ. 'For all sad words of tongue and pen, the saddest are these: It might have been'. ಹೀಗೆ ಕಾಡೋದಿಕ್ಕೆ ಕಾರಣ ಏನಾದ್ರು ಇದೆಯ? ಗೊತ್ತಿಲ್ಲ. ಗೊತ್ತಿದ್ದಿದ್ರೆ, ಹೀಗೆ diary ಬರೆಯೋಕೆ ಯಾಕೆ ಕೂರುತ್ತಿದೆ? ಇಲ್ಲಿ ಬಂದಿರೋದೇ ಆ ಉದ್ದೇಶಕ್ಕೆ: ಕಾರಣ ಹುಡುಕೋಕ್ಕೆ. ಎಲ್ಲವನ್ನ ಯೋಚನೆ ಮಾಡಿ ಆಮೇಲೆ ಪೇಪರ್ ಮೇಲೆ ಬರೀತೀನಿ ಅನ್ನೋದು ಶುದ್ಧ ಸುಳ್ಳು. ಬರೀ ಒಂದು skeleton ತಯಾರು ಮಾಡ್ಕೊಬೋದೇ ಹೊರತು ಹೆಚ್ಚೇನೂ ಸಾಧ್ಯ ಇಲ್ಲ. At least, ನಂಗೆ ಹಾಗೆ. ಲಹರಿಯಲ್ಲಿ ಬರೆಯೋವಾಗ, ಸುಪ್ತಮನಸ್ಸಲ್ಲಿ ಇರೋದು ಕೂಡ ಹೊರಗೆ ಬರುತ್ತೆ ಅಂತ ಎಲ್ಲೋ ಓದಿದ್ದೆ. ಎಷ್ಟೇ ಆಗ್ಲಿ, ಇದು ನನ್ನ diary. ಇಲ್ಲಿ ಏನು ಮುಚ್ಚು ಮರೆ?
ಈ ಕೆಲವು ದಿನಗಳ ಹಿಂದೆ ಒಂದು ಘಟನೆ ನಡೀತು. Facebookನಲ್ಲಿ scroll ಮಾಡ್ತಾಯಿದ್ದೆ - ಅದೊಂದು ಕೆಟ್ಟ ಅಭ್ಯಾಸ ನೋಡು. Time ಸಿಕ್ಕಾಗೆಲ್ಲ ಬರೀ ಇಷ್ಟೇ ಆಯಿತು. ಬೇರೆಯವರ ಜೀವನದ ಬಗ್ಗೆ ಇಲ್ಲದೆ ಇರೋ ಕುತೂಹಲ ಹುಟ್ಟಿಸೋ ಅಂತ ಕೆಲಸ ಮಾಡತ್ತೆ ಅದು. ಎಲ್ಲರು ಖುಷಿಯಾಗಿದ್ದಾರೆ, ಚೆನ್ನಾಗಿದ್ದರೆ ಅಂತಾನೆ ತೋರ್ಸೋದು. ಅಲ್ಲ. ಚೆನ್ನಾಗಿರ್ಲಿ. ಆದ್ರೆ, ಅದರ ಪ್ರದರ್ಶನ ಯಾಕೆ? ಅದನ್ನ ನೋಡಿ ಸಂಬಂಧ ಪಟ್ಟೋರು ಪಡದೆ ಇರೋರು likeಗಳ ಮಳೆ ಸುರಿಸೋದು. ಅಂದುಕೊಂಡಷ್ಟು likes ಬರದೇ ಇದ್ದಾಗ 'ಯಾಕೆ ಬರಲಿಲ್ಲ?' ಅಂತ ಯೋಚಿಸಿ ಕೂರೋದು, ಪದೇ ಪದೇ check ಮಾಡೋದು. ಎಷ್ಟೋ ಬಾರಿ disable ಕೂಡ ಮಾಡಿದ್ದೀನಿ phoneನಲ್ಲಿ. ಆದರೆ, ನಂದೇ photo upload ಮಾಡಕ್ಕೆ ಮತ್ತೆ enable ಮಾಡ್ತೀನಿ. - ಇರ್ಲಿ. ಅವತ್ತು ಹಾಗೆ ನೋಡ್ತಾ ಇದ್ದಾಗ, ನನ್ನ school classmate ಒಬ್ಬಳ ಫೋಟೋ ಕಣ್ಣಿಗೆ ಬಿತ್ತು.
ಈಗ ಏಳೆಂಟು ವರ್ಷದಿಂದ ನಾವುಗಳು ಯಾರು contactನಲ್ಲಿಲ್ಲ. Facebookನಲ್ಲೂ ಸಂಧಿಸೋದು ಕಡಿಮೆ. ಅವತ್ತು ಅದೇನು ಗ್ರಹಚಾರವೋ, ಕಂಡಿತು. ಆಗ ಒಂದು ಸತ್ಯದ ಅರಿವಾಯ್ತು. Schoolನಲ್ಲಿ ಇರುವ ರೂಪಕ್ಕೂ ಅನಂತರ ಆಗುವ ಬದಲಾವಣೆಗೂ ಅದೆಷ್ಟು ವ್ಯತ್ಯಾಸ?! Change ಅಲ್ಲ ಅದು. Transformation. ಅವಳು ಮತ್ತು ನಮ್ಮ ಇತರೆ classmates ಕೆಲವರು ಎಲ್ಲೋ ಊಟಕ್ಕೋ ತಿಂಡಿಗೋ ಹೋಗಿದ್ದಾಗ ತೆಗೆದ photo. Edit ಮಾಡಿದ್ದರು, ನಿಜ. Even accounting for that, ಅದೆಂಥ ಜಾದು ಅನ್ನಿಸ್ತು! ನಾನು ಕೂಡ like ಮಾಡಿದೆ.
ಕೆಲವು ನಿಮಿಷಗಳ ನಂತರ, ಮತ್ತೆ phone vibrate ಆಯಿತು. Friend request ಬಂದಿತ್ತು. ಅದೇ ಫೋಟೋದಲ್ಲಿ ಇದ್ದ ನನ್ನ ಇನ್ನೊಬ್ಬಳು classmate ಇಂದ. Accept ಮಾಡಿದ ನಂತರ Messengerನಲ್ಲಿ ಮತ್ತೆ notification ಬಂತು. ಅದನ್ನ ನೋಡೋವಾಗ ಕೈತಪ್ಪಿ 'wave' ಆಗಿ ಹೋಯ್ತು. It was not anything close to a Freudian slip! 'ಕರ್ಮವೇ' ಅಂದುಕೊಂಡೆ. ಒಟ್ಟಿಗೆ ಓದುತ್ತಿದ್ದಾಗಲೇ ಹೆಚ್ಚಾಗಿ ಏನು ಮಾತಾಡದೆ ಇದ್ದ ನಾನು, ಈಗ ಇದ್ದಕ್ಕಿದ್ದ ಹಾಗೆ 'Hi' ಅಂದರೆ - ಅದು ಈಗಿನ ಫೋಟೋ ನೋಡಿ - ಎಷ್ಟು cheap ಅಂತ ಭಾವಿಸಲ್ಲ ಅವಳು ನನ್ನ. ಯಾವ ಸಹವಾಸವೂ ಬೇಡ ಅಂತ wifi off ಮಾಡಿ, ನನ್ನ ಓದಿನ ಕಡೆಗೆ ಹೋದೆ. ಸಂಜೆ ನೋಡಿದಾಗಲೂ ಏನು ಬಂದಿರಲಿಲ್ಲ. 'ಸಧ್ಯ. ಅವಳು ignore ಮಾಡಿರಬೇಕು. ಮಾಡಿದ್ದೇ ಒಳ್ಳೆಯದಾಯ್ತು' ಅಂತ ನಿಟ್ಟುಸಿರು ಬಿಟ್ಟೆ.
ಮಲಗುವ ಮುನ್ನ phone check ಮಾಡುವ ದುರಭ್ಯಾಸ ಇದೆ. (ಹೇಗಾದರೂ ಬಿಡಿಸಿಕೊಳ್ಳಬೇಕು!) ನೋಡುವಾಗ messengerನ notification ಬಂತು. 'ಹೇಗಿದ್ದೀಯ?' ಅಂತ ಕಳಿಸಿದ್ದಳು. ಗಲಿಬಿಲಿಗೊಂಡೆ. Seen ಮಾಡದೇ, off ಮಾಡಿ ಹೊದಿಗೆಯೊಳಗೆ ಸೇರಿಕೊಂಡೆ. 'ಏಳುವ ವೇಳೆಗೆ ಇದೆಲ್ಲ ಕನಸು ಅಂತ ಅರಿವಾಗತ್ತೆ' ಎಂದು ಯೋಚಿಸುತ್ತ ಮಲಗಿದೆ. ಕೆಟ್ಟ ಕನಸೋ ಒಳ್ಳೆಯ ಕನಸೋ ಗೊತ್ತಿಲ್ಲ. ಅದ್ಯಾಕೆ ಹಾಗೆ ಗಾಬರಿ ಆದ್ನೋ ಗೊತ್ತಿಲ್ಲ. ರಾತ್ರಿ ಎಲ್ಲ ಏನೇನೋ ಕನಸುಗಳು. ಹಲವು ಬಾರಿ ಎಚ್ಚರ ಆಯಿತು. ಎರಡು ಬಾರಿ ಉಚ್ಛೆ ಹುಯ್ದು, ನೀರು ಕುಡಿದು ಬಂದು ಮಲಗಿದೆ. ಬೆಳಗ್ಗೆ ಎದ್ದಾಗ ಅನ್ನಿಸಿತು: 'ಹೇಗೂ ಮಾತು ಆರಂಭ ಆಗಿದೆ. ಈಗ ಏನು reply ಕೊಡದೆ ಇದ್ದರೆ cheap ಅಂತ ಭಾವಿಸಬಹುದು. ಹೇಗಿದ್ದರೂ ನಾನು ಬೆಳಗ್ಗೆ message ಕಳಿಸಿದರೆ ಅವಳು ಸಂಜೆಗೋ ರಾತ್ರಿಗೋ reply ಮಾಡೋದು. 'ಎಲ್ಲಿದ್ಯಾ?' 'ಹೇಗಿದ್ಯ?' 'ಏನು ಮಾಡುತ್ತಿರುವೆ?'ಗಿಂತ ಮುಂದೆ ಈ chat ಕ್ರಮಿಸಲ್ಲ' ಅಂತ. ಅದೇ ಭರವಸೆಯ ಮೇಲೆ reply ಕಳಿಸಿ ನಿರಾತಂಕವಾಗಿ ನನ್ನ ಕೆಲಸದ ಕಡೆ ಗಮನ ಕೊಟ್ಟೆ. ಎರಡು ದಿನ ಹೀಗೇ ಕಳೀತು.
ಅವತ್ತು ಶನಿವಾರ. ಇದ್ದಕಿದ್ದ ಹಾಗೆ ಅವಳಿಂದ message ಬಂತು. ನಾನು ಔಪಚಾರಿಕವಾಗಿ ಏನೋ ಹೇಳುತ್ತಿದ್ದೆ. ನನಗೂ class ಇರಲಿಲ್ಲ. ಅವಳಿಗೂ ಏನು ಕೆಲಸ ಇರಲಿಲ್ಲ ಅಂತ ಕಾಣುತ್ತೆ. ನಮ್ಮ staggered conversation ಅವತ್ತು continuous ಆಯ್ತು. ಮಾತಿನ ಮಧ್ಯೆ ಅವಳು 'ನಿನ್ನನ್ನ ನೆನ್ನೆ ನೋಡಿದೆ' ಅಂದಳು. Metro stationನ ಬಳಿಯಲ್ಲೇ ಅವಳ ಮನೆಯಂತೆ. ನಾನು ಹೋಗಿ ಬರುವಾಗ ಯಾವಾಗಲೋ ಕಂಡಿದ್ದಳಂತೆ. ಆದರೆ, ನಾನೇ ಅನ್ನುವ ಖಾತರಿ ಇಲ್ಲದೆ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ. 'ಮುಂದಿನ ಬಾರಿ ಖಂಡಿತ ಮಾತಾಡೋಣ' ಅಂದಳು. ಒಂದು ಕ್ಷಣಕ್ಕೆ ಹೊಟ್ಟೆಯಲ್ಲಿ ಏನೋ ಕಸಿವಿಸಿ ಆಯಿತು. ಇಲ್ಲ ಎನ್ನಲಾಗದೇ, ಹೌದು ಎನ್ನಲಾಗದೇ ಕೇವಲ ಒಂದು smiley ಕಳಿಸಿದೆ.
ಕೆಲವು ಬಾರಿ ನನ್ನ ನಡತೆ, moves ನನಗೇ ಆಶ್ಚರ್ಯ ಉಂಟು ಮಾಡತ್ತೆ. ಮಾರನೇ ದಿನದಿಂದ ನಾನು ಆ ರಸ್ತೆಯಲ್ಲಿ ಸ್ವಲ್ಪ ವೇಗವಾಗೇ ನಡೆಯಲು ಶುರು ಮಾಡಿದೆ - ಬೇಗ ಆ ರಸ್ತೆ ಕ್ರಮಿಸಿ stationನ ಒಳಗೆ ಸೇರಿಬಿಡಬೇಕು ಅನ್ನುವ ತವಕ. ಎರಡು ಮೂರು ದಿನಗಳು ಆಗಿರಬಹುದು. Stationಗೆ ಹೋಗುವಾಗ ಅವಳು ಎದುರೇ ಪ್ರತ್ಯಕ್ಷವಾದಳು. (ಆಗ ಇನ್ನೊಂದು ಸತ್ಯದ ಅರಿವಾಯ್ತು: Facebook, instagramನ filterಗಳ ಬಗ್ಗೆ. ಅವುಗಳ ಸಹಾಯವಿಲ್ಲದೆಯೂ ಚೆನ್ನಾಗೇ ಇದ್ದಳು. ಆದರೆ ಅಲ್ಲಿ ಕಂಡಷ್ಟಲ್ಲ. ಇರಲಿ.) ಕೆಲವು ಮಾತು ಆಡುವಷ್ಟರಲ್ಲೇ, ಅದೇಕೋ ನನ್ನ ಕಿವಿ ಕೆಂಪಾಗುವ ಅನುಭವ ಆಯ್ತು. ಇಬ್ಬರಿಗೂ ಸಂಕೋಚ ಆಗಬಾರದು ಅಂತ ಯೋಚಿಸಿ 'Classಗೆ ಹೊತ್ತಾಯ್ತು' ಅಂತ ಹೇಳಿ ಹೊರಟೇಬಿಟ್ಟೆ.
ಅದಾದ ನಂತರ almost ಪ್ರತಿದಿನ, ನಾನು ಹೋಗುವ, ಬರುವ ವೇಳೆಗೆ ಸಿಗೋಳು. ಏನಿಲ್ಲದಿದ್ದರು ಅವಳ ಮನೆಯ ಬಳಿ ನಿಂತು ಯಾರೊಂದಿಗಾದರೂ ಮಾತನಾಡುತ್ತಿರೋಳು. ನಾನು ಕೂಡ ಛಳಿ ಬಿಟ್ಟು ಮಾತಾಡಲು ಶುರು ಮಾಡಿದೆ. 'ಕಥೆಯೊಂದು ಶುರುವಾಗಿದೆ' ಅಂತ ಅನ್ನಿಸಲಿಕ್ಕೆ ಶುರುವಾಯ್ತು.
ಇದೇ ಸಮಯಕ್ಕೆ, ಒಂದು ದಿನದ ಮಟ್ಟಿಗೆ ಅಪ್ಪ ಅಮ್ಮ ಯಾವುದೋ ಊರಿಗೆ ಹೋದರು. ಅವತ್ತು ಮನೆಗೆ ವಾಪಾಸಾಗುವಾಗ ಇದ್ದಕ್ಕಿದ್ದಂತೆ idea ಹೊಳೆಯಿತು: ಹೇಗಿದ್ದರೂ ಮನೆಗೆ ಹೋಗಿ ನಾನೇ coffee ಮಾಡಬೇಕು. ಅದರ ಬದಲು, ಅವಳು ಸಿಕ್ಕಾಗ, ಹತ್ತಿರದಲ್ಲೇ ಇದ್ದ collegeನ ಪಕ್ಕದ ಸಣ್ಣ coffee shopನಲ್ಲಿ coffeeಗೆ ಕರೆದರೆ?! A lot can happen over coffee ಅಂತ ಯಾರೋ ಪುಣ್ಯಾತ್ಮರು ಹೇಳಿದ್ದಾರೆ. ನನ್ನ ಯೋಚನೆಗೆ ನಾನೇ ಬೆನ್ನು ತಟ್ಟಿಕೊಂಡು ನಡೆದೆ. ನನ್ನ ಅದೃಷ್ಟವೋ ಏನೋ, ಅವತ್ತು ಅವಳು ಅಲ್ಲಿ ಕಾಯುತ್ತಿರಲಿಲ್ಲ. 'ಛೇ' ಎಂದು ಮನೆಗೆ ಬಂದು ಒಬ್ಬಂಟಿಯಾಗಿ coffee ಹೀರುತ್ತಾ ಕೂತೆ. (ಇದೆಲ್ಲ ಬರೆಯುತ್ತಾ ನನಗೇ ಗೊತ್ತಾಗದ ರೀತಿಯಲ್ಲಿ ಆ lineಗಳು ಏಕೆ ಕಾಡುತ್ತಿವೆ ಅಂತ ಸ್ಫಷ್ಟ ಆಗುತ್ತಿದೆ.)
ಇದೆಲ್ಲ ನಡೆದದ್ದು ಮೂರ್ನಾಲ್ಕು ವಾರಗಳ ಹಿಂದೆ. ಈ ಮಧ್ಯೆ ಅವಳು ಒಂದು ದಿನವೂ ಕಾಣಲಿಲ್ಲ. Facebookನಲ್ಲಿ ಸಂಪರ್ಕಿಸೋಕೆ ನನಗೂ ಹಿಂಜರಿಕೆ. ಹೀಗಿರುವಾಗ, ನೆನ್ನೆ ನನ್ನ laptopನಲ್ಲಿ Facebook check ಮಾಡುತ್ತಿದ್ದೆ - phoneನಲ್ಲಿ ಸಧ್ಯಕ್ಕೆ disable ಮಾಡಿದ್ದೀನಿ. ಅವಳ ಮದುವೆಯ ಫೋಟೋ ಕಣ್ಣಿಗೆ ಬೀಳಬೇಕೇ?! ಒಂದು ವಾರದ ಹಿಂದೆ ಮದುವೆಯಾಗಿ ಹೋಗಿದೆ. 'Congratulations'ಗಳ, likeಗಳ ಸುರಿಮಳೆಯೇ ನಡೆಯುತ್ತಿದೆ ಆ photoಗಳ ಮೇಲೆ.
ಕೆಲವು ಸಮಯ ಏನೂ ತಿಳಿಯದ numbness ಆವರಿಸಿತು. ಅಮ್ಮ ಬಂದು coffee ಇಟ್ಟು ಹೋದದ್ದೂ ಗೊತ್ತಾಗಲಿಲ್ಲ. ಎರಡು ಬಾರಿ phone ring ಆಗಿದ್ದೂ ಗೊತ್ತಾಗಲಿಲ್ಲ. ನಾನೂ like ಮಾಡಬೇಕಾ? ಅಥವಾ unfriend ಮಾಡಬೇಕಾ? ಅನ್ನುವ ಹೊಯ್ದಾಟದಲ್ಲಿ laptop ಮುಚ್ಚಿ ಹೊರನಡೆದೆ. Messengerನಲ್ಲಿ ಶುಭಾಶಯ ತಿಳಿಸೋಣ ಅಂದುಕೊಂಡು phone ತೆಗೆದು ಕೆಲವು ದಿನಗಳ ಕಾಲ ನಮ್ಮ ನಡುವೆ ನಡೆದಿದ್ದ chat ಓದಕ್ಕೆ ಶುರು ಮಾಡಿದೆ. ನಾನು ಪೂರ್ತಿ 'Queen's English'ನಲ್ಲಿ ಮಾತಾಡಿದ್ದರೆ, ಅವಳು SMS ಭಾಷೆಯಲ್ಲಿ ಉತ್ತರಿಸಿದ್ದಳು. ಗಂಡನ ಜೊತೆಗಿನ photo ಒಂದನ್ನು profile picture ಮಾಡಿಕೊಂಡಿದ್ದಾಳೆ ಈಗ. ಯಾವ ಶುಭಾಶಯವೂ ಬೇಡ ಅನ್ನಿಸಿ phone ಒಳಗಿಟ್ಟೆ.
ಅದೇಕೋ, ಎದುರಿಗೆ ಸ್ವಲ್ಪ ಕಾಣುತ್ತಿದ್ದ dark circles ಈ photoದಲ್ಲಿ ಹೆಚ್ಚಾಗೇ ಕಾಣುತ್ತಿದೆ, ಮದುವೆಯ make-up ಇದ್ದರೂ. ಹಾಗೆಂದೇ message ಕಳಿಸಲಾ ನಾಳೆ? ಬೇಡ. ನನ್ನನ್ನು cheap ಎಂದು ಭಾವಿಸಿದರೆ?! ಆ ಸಹವಾಸವೇ ಬೇಡ.'
No comments:
Post a Comment