Monday, December 23, 2013

ಮನೆ ಮಾತು



ಅರ್ಪಣೆ: ಈಚೆಗೆ ಹೊಸ ರೂಪ ಪಡೆಯಲೆಂದು ಹೋದ, ಆತ್ಮೀಯವೂ ಆದ ಮನೆಯೊಂದಕ್ಕೆ!


ರಾತ್ರಿ ಹನ್ನೆರಡು ಗಂಟೆ ಇದ್ದಿರಬಹುದು. ಸಧ್ಯಕ್ಕೆ ಮನೆಯಲ್ಲಿ ಗಡಿಯಾರವೂ ಇರಲಿಲ್ಲ. ಇವಳು ಮೆಲ್ಲಗೆ, ಬೇರೆಯವರ ನಿದ್ದೆ ಹಾಳಾಗದಂತೆ ನಡೆದು ಮನೆಯ ಹಜಾರಕ್ಕೆ ಬಂದಳು. ಕತ್ತಲಿಗೆ ಕಣ್ಣು ಒಗ್ಗಲಿ ಎಂದು ಸುತ್ತಲೂ ಕಣ್ಣು ಹಾಯಿಸಿದಳು. ಅಲ್ಲಿಯೇ ಇದ್ದ ಒಂದು ಕುರ್ಚಿಯ ಮೇಲೆ ಹೋಗಿ ಎಲ್ಲಿಯೋ ಕಳೆದುಹೋದವಳಂತೆ ಕೂತಳು.

"ಏನಾಯ್ತು? ನಿದ್ದೆ ಬರಲಿಲ್ವ?" - ಯಾರೋ ಕೇಳಿದರು.
ಯಾರೆಂದು ಇವಳು ತಿರುಗಿ ನೋಡಿದಳು. ಅವಳ ಪಕ್ಕಕ್ಕೆ ಇದ್ದ ಗೋಡೆ ಇವಳೊಂದಿಗೆ ಮಾತಾಡುತಿತ್ತು. "ಇಲ್ಲ. ನಿದ್ದೆ ಹತ್ತಲಿಲ್ಲ. ಅದ್ಕೆ ಬಂದು ಇಲ್ಲಿ ಕೂತೆ. ಹೌದು, ನೀನು ಮಾತು ಯಾವಾಗ ಕಲಿತೆ?" - ಕೇಳಿದಳು
ಗೋಡೆ: ಮೊದಲಿಂದಲೂ ನನಗೆ ಗೊತ್ತು. ಆದರೆ 'ಮೌನ ಬಂಗಾರ' ಅಂತ ಸುಮ್ಮನೆ ಇದ್ದೆ. ಹೇಳು - ನಾಳೆಯ ಹೊಸ ಆರಂಭದ ಉತ್ಸುಕತೆಯಿಂದ ನಿದ್ದೆ ಬರ್ತಿಲ್ವ?
ಇವಳು: ಇಲ್ಲ. ಬೇರುಗಳನ್ನ ಕಿತ್ತು ಬೇರೆಡೆ ಕಸಿ ಮಾಡಬೇಕಲ್ಲ ಅನ್ನೋ ದುಃಖ, ಆತಂಕ...
ಗೋಡೆ: ಯಾವತ್ತಿಗೂ ಮುಂದೆ ಧೈರ್ಯದಿಂದ ನೋಡಬೇಕು. ಹೆದರಬಾರದು.
ಇವಳು: ವಯಸ್ಸಾಗಿದೆ. ಮೊದಲಿದ್ದ ಶಕ್ತಿ ಇವಾಗ ನನ್ನಲ್ಲಿ ಇಲ್ಲ. ಆತ್ಮವಿಶ್ವಾಸ ಕೂಡ ಕುಗ್ಗಿದೆ. ಜೊತೆಗೆ ನೆನಪುಗಳು ಭಾರವಾಗಿ ಕಣ್ಣೀರು ಉಕ್ಕುತ್ತೆ.
ಗೋಡೆ: ನೆನಪುಗಳು ನಿನಗೆ ಜೀವದ ಪಾಠಗಳನ್ನ ಕಲಿಸಿ ನಿನ್ನ ದಾರಿಯನ್ನ ನಿನ್ನ ಕಣ್ಣಿಗೆ ಕಾಣೋ ಹಾಗೆ ಮಾಡಬೇಕು. ಹೀಗೆ ಕಣ್ಣೀರಿಂದ ದಾರೀನ ಮಬ್ಬಾಗಿಸಬಾರದು.
ಇವಳು: ಏನು ಮಾಡಲಿ? ಮೂವತ್ತು ವರ್ಷಗಳ ಕಾಲ ಇದ್ದ ಮನೆ... ಇದನ್ನ ತೊರೆದು ಇವಾಗ - ವಯಸ್ಸಾದ ಸಮಯದಲ್ಲಿ ಇನ್ನೆಲ್ಲೋ ಹೋಗಿ ಬದುಕಬೇಕು ಅಂದರೆ ನೋವಾಗಲ್ವ?
ಗೋಡೆ: ಅಲ್ಲಿಗೇ ಏನು ಶಾಶ್ವತವಾಗಿ ಹೋಗ್ತಿಲ್ವಲ್ಲಾ...ಸ್ವಲ್ಪ ದಿನಗಳ ಮಟ್ಟಿಗೆ ತಾನೇ?
ಇವಳು: ಆದರೂ...ಮತ್ತೆ ಬಂದಾಗಲೂ ಮೊದಲಿನಂತೆ ಇರುವುದಿಲ್ಲವಲ್ಲಾ...ಎಲ್ಲವೂ ಹೊಸತಾಗಿರುತ್ತೆ. ನೀ ಹೇಳಿದ ನೆನಪಿನ ಪಾಠಗಳು ಮಾಸಿ ಹೋಗ್ತಾವೆ.
ಗೋಡೆ: ಖಂಡಿತ ಇಲ್ಲ. ಹೊಸ ರೂಪದಲ್ಲಿ ಹಳೆಯ ಚೇತನ ಇರುತ್ತೆ. ರೂಪ ಬದಲಾದರೂ ಆತ್ಮ ಇರತ್ತೆ.
ಇವಳು: ಹೇಗೆ ಸಾಧ್ಯ? ನಾನು ಈ ಮನೆಗೆ ಬಲಗಾಲಿಟ್ಟು ಬಂದ ಘಳಿಗೆಯನ್ನ ಆ ಹೊಸ ಮನೆ ನನಗೆ ಹಿಂದಿರುಗಿಸಿ ಕೊಡತ್ತ? ನನ್ನ ಮಗನನ್ನ ಅವನು ಹುಟ್ಟಿದ ಮೇಲೆ  ಈ ಮನೆಗೆ ಕರೆದುಕೊಂಡು ಬಂದ ಕ್ಷಣ ಮಾಸದೇ ಉಳಿಯುತ್ತಾ ? ನಾವು ಪಟ್ಟ ಅದೆಷ್ಟೋ ಸಂಭ್ರಮದ ಕ್ಷಣಗಳನ್ನು ಮತ್ತೆ ನಮಗೆ ನೆನಪು ಮಾಡುವ ಏನಾದರೂ ಸಂಕೇತ ಇರುತ್ತಾ?
ಗೋಡೆ: ಕಣ್ಮುಚ್ಚಿಕೋ! ನಿನಗೆ ಬೇಕೆಂದಾಗ ನಿನ್ನ ಬಾಲ್ಯದ ಕ್ಷಣಗಳು ನೆನಪಾಗುವುದಿಲ್ಲವೇ? ಈಗ ಆ ಕಟ್ಟಡಗಳೂ ಅವಶೇಷವಾಗಿ ಅಲ್ಲಿ ಬೇರೇನೋ ಎದ್ದು ನಿಂತಿರುತ್ತದೆ. ಆದರೂ, ನೆನಪು ಮಾಸುವುದಿಲ್ಲ. ಇದೂ ಹಾಗೆಯೇ.
ಇವಳು: ಅದು ಹೇಗೆ ಇಷ್ಟು ಸಲೀಸಾಗಿ ಮಾತಾಡ್ತೀಯ? ನಿನಗೆ ಏನೂ ಅನಿಸಲ್ವ? ಮಾತಾಡೋ ನಿನಗೆ ಭಾವನೆಗಳು ಇದ್ಯೋ ಇಲ್ವೋ?
ಗೋಡೆ: ಭಾವನೆಗಳು ಇವೆ. ನಿಮಗಿಂತ ಹೆಚ್ಚಾಗಿಯೇ ಇವೆ. ನೀವುಗಳು ಮಾತಾಡಿ ಅವನ್ನ ಹೊರಹಾಕ್ತೀರಿ. ನಾನೇನು ಮಾಡಲಿ? ಇವತ್ತು - ಇಪ್ಪತ್ತೊಂಬತ್ತು ವರ್ಷ, ಆರು ತಿಂಗಳು, ಹದಿನೈದು ದಿನಗಳ ನಂತರ - ಮೊದಲ ಬಾರಿಗೆ ಮಾತಾಡ್ತಾ ಇದ್ದೀನಿ. ನೀ ಹೇಳಿದ ಎಲ್ಲಾ ಘಟನೆಗಳಿಗೂ ನಾನೇ ತಾನೇ ಮೂಕ ಪ್ರೇಕ್ಷಕ? ನೀನು ಬಂದದ್ದೂ ನೋಡಿದ್ದೇನೆ. ನಿನ್ನ ಮಗ ಬಂದದ್ದೂ ನೋಡಿದ್ದೇನೆ. ನಿನ್ನ ಸೊಸೆ ಬಂದದ್ದೂ ನೋಡಿದ್ದೇನೆ. ಯಾವ ಮಾತೂ ಆಡದೇ, ನಿನ್ನ ಮಗನಿಗೆ ಕ್ಯಾಚಿಂಗ್ ಪ್ರಾಕ್ಟಿಸ್ ನೀಡಿದ್ದೇನೆ. ನಿನ್ನ ಮಗನ ಮೊದಲ ಬೌಲರ್ ನಾನೆ. ನಿನ್ನ ಮಗ, ನಿನ್ನ ಗಂಡ ಕ್ರಿಕೆಟ್ ಆಡುವಾಗ ಕೀಪರ್ ನಾನೆ. ನೀವು  ಖುಷಿ ಪಟ್ಟಾಗ ನಾನೂ ಖುಷಿ ಪಟ್ಟಿದ್ದೇನೆ. ನಿಮಗೆ  ಬೇಜಾರಾದಾಗ ಎಷ್ಟೋ ಬಾರಿ ಸಮಾಧಾನ ಮಾಡಲು ಮುಂದಾಗಿ, ಆನಂತರ, ಮಾತಾಡುವ ಹಾಗಿಲ್ಲ ಎಂದು ಸುಮ್ಮನಾಗಿದ್ದೇನೆ. ನಿಮ್ಮ ಕಷ್ಟ, ಸುಖ, ಜಗಳ, ಮನಸ್ತಾಪ, ಬೈಗುಳ, ಸಂಭ್ರಮ - ಇವೆಲ್ಲಕ್ಕೂ ಸಾಕ್ಷಿಯಾಗಿ ನಿಂತವನು ನಾನಲ್ಲವೇ?
ಇವಳು: ಸಾಕು! ಇನ್ನು ಹೆಚ್ಚಿಗೆ ಹೇಳಿ ಮತ್ತೆ ನನ್ನನ್ನ ಅಳೋ ಹಾಗೆ ಮಾಡಬೇಡ! ನಿನಗೆ ಮಾತು ಬರುತ್ತೆ ಅಂತ ಮೊದಲೇ ಗೊತ್ತಾಗಿದ್ದರೆ, ನನ್ನ ಗಂಡ-ಮಗನ ಎದಿರು ಹೇಳಲಾರದ ಕಷ್ಟ ಸುಖಗಳನ್ನು ನಿನಗೆ ಅರುಹಿ ನನ್ನ ಭಾರ ಇಳಿಸಿಕೊಳ್ಳುತಿದ್ದೆ.
ಗೋಡೆ: ಎಲ್ಲಕ್ಕೂ ಕಾಲ ಕೂಡಿ ಬರಬೇಕು ಅಲ್ವ?
ಇವಳು: ಅಲ್ಲ, ನಾಳೆ ದಿನ ನಿನ್ನನ್ನ ಒಡೆಯುತ್ತಾರೆ  ಅಂತ ಭಯ ಆಗಲ್ವ ನಿನಗೆ?
ಗೋಡೆ: ಭಯ ಯಾಕೆ? ಹುಟ್ಟಿದ ಮೇಲೆ ಸಾವಿಗೆ ಹೆದರೋಕ್ಕೆ ಆಗತ್ಯೇ? ಯಾರೋ ಮಹಾನ್ ವ್ಯಕ್ತಿ ಹೇಳಿದ್ದಾರಂತೆ "ಅದ್ಯಾಕೆ ಸಾವಿಗೆ ಹೆದರಬೇಕೋ ಕಾಣೆ! ನಾವಿದ್ದಾಗ ಅದು ಬರಲ್ಲ. ಅದು ಬಂದಾಗ ನಾವು ಇರಲ್ಲ." ಅಂತ. ಹೀಗಿರೋವಾಗ, ಚಿಂತೆ ಯಾಕೆ? ಕೇಳು - ಬದುಕಿ ಸಾಯೋದು ದೊಡ್ದದಲ್ಲಾ...ಸತ್ತು ಬದುಕೋದು ಇದ್ಯಲ್ಲಾ - ಅದು ಸಾಧನೆ ಅಂದ್ರೆ!
ಇವಳು: ಅಬ್ಬಾ! ಅದೆಂಥಾ ಮಾತು! ಅದು ನಿಜ ಆದರೂ...
ಗೋಡೆ: ಹೋಗಿ ಮಲಗು! ನಾಳೆ ಆರಂಭವಾಗುವ ನಿನ್ನ ಹೊಸ ಜೀವನಕ್ಕೆ ಹೊಸ ಹುರುಪಿನಿಂದ ಕಾಲಿಡು. ನನ್ನ ಆಶೀರ್ವಾದ ನಿನ್ನ ಜೊತೆ ಯಾವಾಗಲೂ ಇರುತ್ತೆ! ನಾನೂ  ಇರ್ತೇನೆ! ಫೀನಿಕ್ಸ್ ಹಕ್ಕಿ ಹಾಗೆ  ಭೂತಾಯಿ ಸೇರಿ ಮತ್ತೆ ಹೊಸ ಚೈತನ್ಯದ ಜೊತೆ ಆಚೆ ಬರ್ತೇನೆ! ಹೋಗು...

No comments:

Post a Comment