Friday, October 4, 2013

ಟಿ. ವಿ. ಬಂತು ಟಿ. ವಿ.

 ಅಂದು ಶನಿವಾರ. ರಜಾ ಇದ್ದ ಕಾರಣ  ಸ್ನೇಹಿತರೆಲ್ಲ ಒಟ್ಟಿಗೆ ಕುಳಿತು  ಹರಟೆ ಹೊಡೆಯುತ್ತಾ,  ಕಾಲ "ತಳ್ಳುವ" ಪ್ರಯತ್ನದಲ್ಲಿ ಇದ್ದೆವು.   ಮನೆಯಿಂದ ಹೊರಬಿದ್ದ ಅನುಭವ  ಹಸಿಯಾಗಿಯೇ ಇತ್ತು. ಮಾಡಲು ಬೇರೆ ಏನೂ ಇಲ್ಲದ ಕಾರಣ ಮನೆಯ ನೆನಪು  ಕೂಡ ಮರುಕಳಿಸುತ್ತಿತ್ತು. ಮನೆಯನ್ನು ಮರೆತಿದ್ದೆವು ಎಂದಲ್ಲ - ಆದರೂ, ಮನೆಯ ನೆನಪು ನಮ್ಮ ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಬಾರದು ಎಂದು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತಿದ್ದೆವು.
"ಎರಡು ವಾರಗಳಾದವು. ಮನೆಯಲ್ಲಿದ್ದ ಯಾವ ವಸ್ತು ಆಕರ್ಷಣೆಗಳು ಇಲ್ಲದಂತೆ ಆಗಿದೆ. ಮನೆಯಲ್ಲಿ ಇದ್ದಾಗ ವಾರಕೊಮ್ಮೆ ಸಿನೆಮಾಕ್ಕೆ ಹೋಗುತ್ತಿದ್ದೆ. ಹೊರಗಡೆ ಹೋಗಿ ತಿನ್ನುತ್ತಿದ್ದೆ. ಇಲ್ಲಿಗೆ ಬಂದ ಮೇಲೆ, ತಿನ್ನಲು ಅವಕಾಶವೂ ಇಲ್ಲ, ಆಸೆಯೂ ಇಲ್ಲ" ಎಂದು ಗೆಳೆಯನೊಬ್ಬ  ಹೇಳಿದ. ನಾವುಗಳು ಕೂಡ ತಲೆಯಾಡಿಸಿದೆವು.  ಕೆಲವೇ ದಿನಗಳ  ಅಂತರದಲ್ಲಿ ನಮ್ಮಲ್ಲೇ ಆದ ಬದಲಾವಣೆ ಕಂಡು ನಮಗೆ  ಬೆರಗಾಯಿತು. "ಕಾಲವನ್ನು ತಡೆಯೋರು ಇಲ್ಲ" ಎಂದು ಯಾರೋ  ಹಾಡಿದಂತೆ ಭಾಸವಾಯಿತು!
ಇದ್ದಕಿದ್ದ ಹಾಗೆ ನಮ್ಮ ಆಲೋಚನೆಯನ್ನು ಕತ್ತರಿಸಿ ಬಿಸಾಡುವ ರೀತಿಯಲ್ಲಿ  ಕಿರುಚಾಟ  ಕೇಳಿಬಂತು. ನಮ್ಮ ಎದೆ ಝಗ್ಗೆಂದಿತು. 
  ಯಾರಿಗೆ ಏನಾಯಿತೋ ಎಂದು ಹೊರಗೆ ಓಡಿದೆವು.  ಎಲ್ಲರೂ ಕಾಮನ್ ರೂಂನತ್ತ ಓಡುತ್ತಿದ್ದರು. ನಮ್ಮ ಗಾಬರಿ ಇನ್ನೂ ಹೆಚ್ಚಿತು. ಹೋಗಿ ನೋಡಿದರೆ, ಕಾಮನ್ ರೂಮಿಗೆ  ಒಬ್ಬ ಹೊಸ ಅತಿಥಿಯ ಆಗಮನವಾಗಿತ್ತು. ಹೊಚ್ಚ ಹೊಸ ಟಿ. ವಿ. ಬಂದಿತ್ತು!
ಅದನ್ನು ನೋಡಿಯೇ ಅಷ್ಟು ಜೋರಾದ ಕಿರುಚಾಟ ಆರಂಭವಾಗಿದ್ದು. ಅಷ್ಟು ದಿನಗಳಿಂದ ಟಿ.ವಿಯಿಲ್ಲದೆ ಇದ್ದ ನಮಗೆ ಅದನ್ನು ಕಂಡು ಆದ ಆನಂದ ಕೂಗಾಗಿ ಹೊರಬಿದ್ದಿತ್ತು! ಎಲ್ಲರೂ ತಮ್ಮ ಸ್ನೇಹಿತರಿಗೆ ಕರೆ ಮಾಡಿ, ಬಂದು ನೋಡುವಂತೆ "ಆಹ್ವಾನ" ನೀಡುತ್ತಿದ್ದರು. ಕೆಲವರು ಮನೆಗೆ ಕರೆಮಾಡಿ ತಮ್ಮ ಆನಂದ ಉತ್ಸಾಹಗಳನ್ನು ಫೋನಿನಲ್ಲಿ ಧಾರೆಯೆರೆದರು! ಅವರ ಮುಖಗಳನ್ನು ನೋಡುವುದೇ ಒಂದು ಸಂತೋಷವಾಗಿತ್ತು ನನಗೆ. ಅತಿಥಿಯೊಂದಿಗೆ ಸಂದರ್ಶನದ ಭಾಗ್ಯ ಇನ್ನೂ ನನಗೆ ಲಭಿಸಿರಲಿಲ್ಲ - ರಸ್ತೆಯಲ್ಲಿ ಒಬ್ಬ ಕ್ರಿಕೆಟಿಗ ಅಥವಾ ಸಿನೆಮಾ  ಬಂದಾಗ ಜನ  ಕಿಕ್ಕಿರಿಯುವಂತೆ ಜನ ಕಾಮನ್ ರೂಮ್ನಲ್ಲಿ ತುಂಬಿದ್ದರು. ಸೆಕ್ಯುರಿಟಿ ಮೊದಲಾಗಿ ಎಲ್ಲರು ಅಲ್ಲೇ ಇದ್ದರು - ಆರತಿ, ಪ್ರಸಾದದ ವಿನಿಯೋಗ ಒಂದೇ ಕಡಿಮೆಯಾಗಿತ್ತು ಎನ್ನಬೇಕು! 
 ಮಧ್ಯಾಹ್ನ ಊಟದ ವೇಳೆಯಲ್ಲೂ ಟಿ.ವಿಯದೆ ಮಾತು. ಅದರ ಅಂದ-ಚೆಂದ, ಅಂಕು-ಡೊಂಕುಗಳ ವಿಶ್ಲೇಷಣೆ ನಡೆಯಿತು.  ತಮ್ಮ ತಮ್ಮ ಮನೆಗಳಲ್ಲಿ ಇದ್ದ ಟಿ.ವಿಯ ಹಾಗೂ ಇಲ್ಲಿಯ ಟಿ.ವಿಯ "ತುಲನಾತ್ಮಕ" ಚರ್ಚೆ ನಡೆಯಿತು. ತಮ್ಮ ತಮ್ಮ ನೆಚ್ಚಿನ ಕಾರ್ಯಕ್ರಮಗಳ, ಧಾರಾವಾಹಿಗಳ, ನಟ-ನಟಿಯರ ಚರ್ಚೆಯೂ ನಡೆಯಿತು. ಆದರೆ ನನಗೆ ಏಕೋ ಆ ಉತ್ಸಾಹ ಮೂಡಲಿಲ್ಲ. ತೆಪ್ಪಗೆ ಊಟಮಾಡಿ ಹೊರಬಿದ್ದೆ. 
 ಆ ದಿನ-ರಾತ್ರಿಯೆಲ್ಲ ಎಲ್ಲರು ಕಾಮನ್ ರೂಮ್ನಲ್ಲಿ ಜಮಾಯಿಸಿದ್ದರು.  ನನಗೆ ಇನ್ನೂ  ಸಂದರ್ಶನ ಭಾಗ್ಯ ದೊರೆತಿರಲಿಲ್ಲ. ಕೊನೆಗೆ, ರಾತ್ರಿ ಎಲ್ಲರೂ ಮಲಗಿದ ಮೇಲೆ, ನಾನು ಹೋದೆ. ಟಿ.ವಿ ಮಹಾಶಯ ಅಲ್ಲೇ ಇದ್ದ. ನೋಡಿದೆ - ತೆಳ್ಳಗೆ ಇದ್ದ. ನಾನೇ ಸಣ್ಣ ಎಂದರೆ, ನನಗಿಂತಲೂ ಸಣ್ಣ ಇದ್ದ! ತನ್ನನ್ನು "ಎಲ್ ಜಿ ಎಲ್ ಇ ಡಿ ಎಂದು ಕರೆಯುತ್ತಾರೆ" ಎಂದು ಹೇಳಿದ. ನಾನೂ ನೋಡಿದೆ.  ಅದ್ಯಾಕೋ   ಯಾವ  ಭಾವನೆಯೂ ಮೂಡಲಿಲ್ಲ. "ನೀ  ಯಾರಾದರೂ ನನಗೇನು? ನೀನೇನು  ನಮ್ಮವನೇ? ಎಲ್ಲಿಂದಲೋ ಬಂದಿರುವ ನೀನು, ನನಗೆ ಯಾಕೆ ನಿನ್ನ ಕುಲ ಗೋತ್ರ  ನಾಮ ನಕ್ಷತ್ರ ಹೇಳುತ್ತೀಯೆ?" ಎಂದು ಸ್ವಲ್ಪ ಖಾರವಾಗಿ ಪ್ರಶ್ನಿಸಿದೆ.
 "ನೋಡು - ನೀನು ಯಾರೆಂದು ನೀನು ನನಗೆ ಹೇಳಿಲ್ಲ. ಅಡ್ಡಿ ಇಲ್ಲ. ಆದರೆ, ಇಲ್ಲಿ ಇರುವಷ್ಟು ದಿನ,  ಹೊರ ಜಗತ್ತನ್ನು ಇದ್ದ ಹಾಗೆಯೇ ತೋರಿಸುವ ಪವಿತ್ರ  ಕರ್ತವ್ಯ ನನ್ನದು ಎಂದು ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುವಾಗ ಹೇಳಿದರು. ಅವರು ಹೇಳಿದ್ದನ್ನು ಪಾಲಿಸುತ್ತೇನೆ ಅಷ್ಟೆ. ನಿನ್ನ ನನ್ನ ಭೇಟಿ ಎಷ್ಟು  ಬಾರಿಯಾಗುತ್ತದೋ, ಯಾರು ಬಲ್ಲರು. ಇದ್ದಷ್ಟು ದಿನ ಒಳ್ಳೆ ಸ್ನೇಹಿತರಾಗಿ ಇರೋಣ. ನೀವು ಮನುಷ್ಯರು "ಯಾಂತ್ರಿಕವಾಗಿ" ಲಾಭ-ನಷ್ಟಗಳ ಬಗ್ಗೆ ಯೋಚನೆ ಮಾಡುತ್ತೀರ. ಆದರೆ, ನಾನು ಹಾಗಲ್ಲ. ಇದ್ದಷ್ಟು ದಿನ ಸಾಧ್ಯವಾದಷ್ಟು ಒಳ್ಳೆ ಸಂಬಂಧ, ಗೆಳೆತನ ಇರಲಿ ಎಂದು ಆಶಿಸುತ್ತೇನೆ. ನಿನಗೆ ಒಪ್ಪಿಗೆಯಿದ್ದರೆ, ನನ್ನೊಂದಿಗೆ ಸ್ನೇಹ ಬೆಳೆಸು. ಇಲ್ಲವಾದಲ್ಲಿ, ನನಗೆ ತೊಂದರೆ ಇಲ್ಲ. ಹೇಗಿದ್ದರೂ, ಬೇರೆಯವರು ಇದ್ದಾರೆ. ನಿನಗೆ ಯಾರು ಇಲ್ಲ ಎಂಬುದು ನೆನಪಿರಲಿ" ಎಂದು ಮಹಾಶಯ ಹೇಳಿದ. 
 ನನ್ನ ಒಬ್ಬಂಟಿತನದ ಅರಿವಾಯಿತು. ಯಾಕೆ ಅಷ್ಟು ಕಟುವಾಗಿ ಮಾತಾಡಿದೆ ಎಂದು ಪಶ್ಚಾತ್ತಾಪ ಉಂಟಾಯಿತು. ತಲೆ ತಗ್ಗಿಸಿ ನಿಂತೆ. "ಬಾ. ನನ್ನ ಮೂಲಕ ಹೊರಗೆ ನೋಡು. ಆಮೇಲೆ ನಿನ್ನ ಒಳಗಡೆ ನೋಡುವೆಯಂತೆ" ಎಂದು ಟಿ.ವಿ ಮಹಾಶಯ ನನಗಾಗಿ ಹೊಸ ಜಗತ್ತನ್ನು ತೆರೆದ. ಬಹಳ ಸಮಯ ಅವನೊಂದಿಗೆ ಚರ್ಚಿಸಿದೆ - ರಾಜಕೀಯ, ಕ್ರೀಡೆ, ಇತಿಹಾಸ, ಮನುಷ್ಯ ಜಾತಿ, ಮನಸ್ಸು, ದೇವರು - ಹೀಗೆ ಹಲವಾರು ವಿಷಯಗಳ ವಿನಿಮಯ ಮಾಡಿಕೊಂಡೆವು. ರಾತ್ರಿ ಎಷ್ಟೋ ಹೊತ್ತಿನ ಬಳಿಕ ಬೀಳ್ಕೊಂಡೆ. ಟಿ.ವಿ ಮಹಾಶಯ ನನಗೆ ಅದೆಷ್ಟೋ ಹೇಳಿಕೊಟ್ಟ - ಎಲ್ಲರೊಂದಿಗೆ ಪ್ರೀತಿಯಿಂದ ಇರಬೇಕು, ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು, ಯಾಂತ್ರಿಕವಾಗಿ ಬದುಕಬಾರದು ಎಂದು ತಿಳಿಸಿಕೊಟ್ಟ. ಹೊರಗಡೆ ಕಪ್ಪಗಿದ್ದರೂ, ಆ ಮಹಾಶಯ ತನ್ನ ಒಳಗಿನ ತೇಜಸ್ಸು, ಬಣ್ಣ, ಸೌಂದರ್ಯಗಳಿಂದ ಬೆಳಗುತ್ತಿದ್ದ. 
 ಹೋಗಿ ಮಲಗಿಕೊಂಡೆ. ಎಷ್ಟೋ ಹೊತ್ತಾಗಿತ್ತು......... 
 ಇದ್ದಕ್ಕಿದ್ದ ಹಾಗೆ ಬಾಗಿಲನ್ನು ಯಾರೋ ಬಡಿದಂತಾಯಿತು. ಸಮಯ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ನಿದ್ದೆಯಿಂದ ಎದ್ದು ಬಾಗಿಲು ತೆರೆದೆ. ಹೊರಗಡೆ ಎಲ್ಲರೂ ಕುಣಿಯುತ್ತಿದ್ದರು. ಏನಾಯಿತು ಎಂದು ಕೇಳಿದೆ. "ನಮ್ಮ ಕಾಮನ್ ರೂಮಿಗೆ ಟಿ.ವಿ ಬಂದಿದೆ. ನೋಡು ಬಾ..." ಎಂದು ನನ್ನ ಸ್ನೇಹಿತರು ಕಿರುಚುತ್ತಾ ಓಡಿದರು..... 

No comments:

Post a Comment