ಶಾಯಿಸೃಷ್ಟಿ
ಹಲವು ತಿಂಗಳ ನಂತರ ಮತ್ತೆ ನನ್ನ blogಗೆ ಮರಳಿದ್ದೇನೆ. ಯಾರೋ English ಕವಿ ಹೇಳಿರುವ ಹಾಗೆ "Poetry is best words in the best order". ಆ ಮಾತಿಗೆ ಇಲ್ಲಿ ನ್ಯಾಯ ಒದಗಿಸಿರುವೆನೋ ಇಲ್ಲವೋ ಗೊತ್ತಿಲ್ಲ. ಪ್ರಾಮಾಣಿಕ ಪ್ರಯತ್ನ ಮಾತ್ರ ಸತ್ಯ
ನೀಲಿ ಶಾಯಿಯ ಜೊತೆ ಬಿಳಿ ಹಾಳೆಗಳು
ಧುಮಿಕ್ಕಿ ಬರುವ ಅದೆಷ್ಟೋ ಚಿತ್ರಗಳು
ಖಾಲಿ ಖಾಲಿ ಕಾಗದದ ಮೇಲೆ
ಮೂಡಿ ಬಂತೊಂದು ಶಾಯಿಯ ಲೀಲೆ
ಶಾಯಿಸೃಷ್ಟಿಯ ಪ್ರತಿಮೆ ಜೇವಗಾಣಲು
ಜೀವವೆಲ್ಲ ಶಾಯಿ ಸೇರಿ ಪ್ರತಿಮೆಯಾಗಲು
ಅಂದಿನ ಕನಸು ಬೆಳಕ ಕಂಡಿತು
ಇಂದಿನ ಬೆಳಕು ಕನಸಾಯಿತು
ಕತ್ತಲಲಿ ಗ್ರಹಿಸಿದ್ದು ಬೆಳಕಲಿ ಕರಗುವುದು
ಬೆಳಕಲಿ ಕಂಡದ್ದು ಕತ್ತಲಲಿ ಕಾಣದು
ಕತ್ತಲ ಗ್ರಹಿಕೆ ಸತ್ಯವೋ?
ಬೆಳಕಿನ ಕಾಣ್ಕೆ ಸತ್ಯವೋ?
ಶಾಯಿಸೃಷ್ಟಿಯಿದು - ಸತ್ಯವೋ? ಮಿಥ್ಯವೋ?
ಇರುವ ರೂಪ ಇನ್ನರೆಘಳಿಗೆಗಿಲ್ಲ
ಒಂದೊಮ್ಮೆ ಮಿಂಚಿ ಮರೆಯಾಗುವುದೆಲ್ಲ
ಕನಸಿಗೂ ನನಸಿಗೂ ಇಲ್ಲಿ ಅಂತರವಿಲ್ಲ
ಯಾವುದೂ ಸತ್ಯವೂ ಅಲ್ಲ - ಮಿಥ್ಯವೂ ಅಲ್ಲ