Sunday, June 10, 2012

                                                                  ಫೀನಿಕ್ಸ್ 


ಮನುಷ್ಯನ ಕಲ್ಪನೆಯ ಅತ್ಯಂತ ಸುಂದರ ಕಲ್ಪನೆ ಈ ಅಗ್ನಿಹಂಸ - phoenix. ಆ ಕಲ್ಪನೆಯ ಸೃಷ್ಟಿ ಇಂದ ಕಲಿಯುವುದು ಬಹಳಷ್ಟಿದೆ. ಅದನ್ನು ಕಲಿಯುವುದರೆಡೆಗೆ ನನ್ನ ಕಿರು ಪ್ರಯತ್ನ ಇದು. ರುಚಿಸುವುದು ಎಂದು ಭಾವಿಸುತ್ತೇನೆ.




....ಅದಾವುದೋ  ಶಕ್ತಿ  - ಅಗೋಚರ - ತನ್ನೆಡೆಗೆ
ತನ್ನೊಳಗೆ ಸರ್ವವನು ಸೆಳೆಯುತಿದೆ
ಸರ್ವವನು ಚದುರಿಸಲೆಂದೊಮ್ಮೆ  ಸಿಡಿದು
ಬ್ರಹ್ಮಾಂಡ ಬೆಳಕು ಮೂಡಿದೆ!

ಮುಂದೆ ನಿಂತಿಹುದೊಂದು ಪಂಚಲೋಹದ ಮೂರ್ತಿ
ಆತ್ಮಶಕ್ತಿಯ ಜ್ವಾಲೆ ಅದರ ಚೇತನವು
ಬಿರುಮಳೆ ಚಳಿಚಂಡಮಾರುತಗಳಿಗಂಜದೆಯೇ
ತಣ್ಣೀರ ಎರಚಿದರು ಬೆಳಗುತಿಹುದು

ತನ್ನೊಡಲ ಜ್ವಾಲೆಗೆ ತನ್ನ ತಮವನೆ ಉಣಿಸಿ
ಜ್ವಾಲೆಯನು ಹಿಗ್ಗಿಸಿ ಉರಿಸಬೇಕು!
ತನ್ನೊಡಲ ಸತ್ವದ ಜ್ವಾಲೆಯಿಂದುದಿಸಿದ
ಅಗ್ನಿಹಂಸವೇ!! ನೀನು ಗರಿಗೆದರಬೇಕು!

ನಿನ್ನ ಕಣ್ಣಿನ ಕಾಂತಿ  ನನ್ನ ಕಣ್ಣಲಿ ಸೇರಿ
ಲೋಕ ಕಾಣುವ ದೃಷ್ಟಿ ಹೊಸತಾಗಬೇಕು
ನಿನ್ನಂತೆ ಎನ್ನ ಮನದ ಗರಿಗಳು ಬಲಿತು
ಸ್ವಚ್ಛಂಧ  ಆಗಸದಿ ಹಾರಾಡಬೇಕು!!