Friday, March 23, 2012

                                     ಬಿಂಬ


ಯುಗಾದಿಗೊಂದು ಸಣ್ಣ ಕವಿತೆ. ಆತ್ಮಸಾಕ್ಷಿ, ಪಾಪಪ್ರಜ್ಞೆ ಇವುಗಳೇ ಈ ಕವಿತೆಯ ಆತ್ಮ. ರುಚಿಸುವುದು ಎಂದು ಭಾವಿಸುತ್ತೇನೆ.

ನಿಂತಿಹೆನು - ಒಬ್ಬಂಟಿಯಾಗಿ
ಎದುರಿಗೆ - ಕಾಲಾತೀತವಾದೊಂದು ಕನ್ನಡಿ
ಹರಿದು ಹೋದ ನೀರನ್ನೆಲ್ಲ ಅಡಕವಾಗಿಸಿಕೊಂಡು
ಬೆಳಕನ್ನು ಪ್ರತಿಫಲಿಸಿ ತುಳುಕುತ್ತಿತ್ತು

ನನ್ನದೇ ರೂಪ - ಆಳೆತ್ತರ ದೇಹ
ಆತ್ಮವಿಶ್ವಾಸ ತುಂಬಿದ ಮುಖ, ಸ್ಮಿತ
ಆದರೂ ಕಣ್ಣ ಕಡಲಾಳದಲ್ಲೆಲ್ಲೋ ಭೀತಿ!
ಹರಿದು ಹೋದ ನೀರನ್ನೆತ್ತಿ ರಾಚಿದಂತೆ 
ನಗುವೆಲ್ಲವೂ ಇಲ್ಲವಾಯಿತು... 

ಹೊಸತ ಸರಿಸಿ ಹಳೆಯ ನೀರು ಬಂದಿತು!
ಅಲ್ಲಿಯೂ ಕಂಡದ್ದು ನನ್ನ ರೂಪವೇ...
ವಿರೂಪವಾಗಿತ್ತು... ಹಸ್ತ ರಕ್ತಸಿಕ್ತವಾಗಿತ್ತು!
ನೀರಲ್ಲಿ ತೊಳೆದರೂ ರಕ್ತ ಕೈಗಂಟಿತು...
ತಿಳಿನೀರ ಕೊಳವೆಲ್ಲ ಕೆಂಪಾಯಿತು...
ಹೊಸ ನೀರಿಗೂ ರಕ್ತ ಹರಡಿತು!

ಕೆನ್ನೀರನ್ನು ಬಿಂಬ ಎನ್ನೆಡೆಗೆರಚಿತು...
ಬಿಂಬದಿಂದ ಓಡಿಹೋಗಲು ಯತ್ನಿಸಿದೆ!
ಕದ ಕಿಟಕಿಗಳೆಲ್ಲವೂ ಮುಚ್ಚಿತ್ತು!
ನಾನು ಕುಸಿದು ಬಿದ್ದೆ...ಬಿಂಬ ನಗುತ್ತಲೇ ಇತ್ತು!          





Friday, March 2, 2012

                                                           ನೆನಪಿನಂಗಳದಲ್ಲಿ....


ಆಕಸ್ಮಿಕವಾಗಿ ನನಗೆ ಕಂಡಂಥ ನನ್ನ ಶಾಲಾದಿನಗಳ ಚಿತ್ರಪಟ ಈ ಸಾಲುಗಳಿಗೆ ಪ್ರೇರಣೆಯಾಯಿತು...ಅನಿಸಿದ್ದಕ್ಕೆ ಬಣ್ಣ ಬಳಿದು ಈ ರೂಪಕ್ಕೆ ತಂದಿದ್ದೇನೆ...


ಪೆಟ್ಟಿಗೆ ಒಳಗಿದ್ದ ಚಿತ್ರವ ಹೊರತೆಗೆದೆ...
ಹಳೆಯದು - ಬಣ್ಣ ಮಾಸಿತ್ತು - ಹಳದಿಯಾಗಿತ್ತು...
ಧೂಳು ಅಡಗಿದ್ದ ಆ ಚಿತ್ರವನೊಮ್ಮೆ ಕೊಡಹಿದೆ
ಧೂಳಿನ ಪದರವನೊರೆಸಿ ಮತ್ತೊಮ್ಮೆ ನೋಡಿದೆ...


ಮುಗ್ಧ ಮುಖಗಳು! ನಿಷ್ಕಲ್ಮಷ ನಗೆಗಳು!
ಅದೇನೋ ಸಾಧಿಸಿದ ಸಂತಸ!
ಇನ್ನೂ ಸಾಧಿಸುವ ಆತ್ಮವಿಶ್ವಾಸ! ಗುರುಗಳಿದ್ದರು...
ಗುರಿಗಳ ಎಡೆಗಿನ ಪಯಣ ಸಾಗುವುದರಲ್ಲಿತ್ತು...


ಹರಿದು ಹಂಚಿ ಹೋದರು - ವಿಶಾಲ ಜಗತ್ತಿನಲ್ಲಿ
ನದಿಯ ನೀರು ಕಡಲ ಸೇರಿ ವಿಲೀನವಾದಂತೆ
ಜನಸಾಗರದಲ್ಲಿ ಅವರೂ ಬೆರೆತು ಹೋದರು...
ದಿಟ...ಜೀವನದಲ್ಲಿ ಬೆರೆತರೋ?
ಬಲ್ಲವರ್ಯಾರು!!!

ಅದೆಲ್ಲೋ ಹುಟ್ಟಿ ಅದೆಂತೋ ಸೇರಿ
ಕೂಡಾಡಿದರು...ಜೊತೆಗೂಡಿ ಬೆಳೆದರು...
ಕಡೆಗೊಂದು ದಿನ...ಹೋದರು!
ಸೇರುವೆಯ ಕೊಂಡಿಯ ಕಡಿದು ಕಿತ್ತೊಗೆದು...
ಇದ್ದೂ ಇಲ್ಲದಂತೆ ಹೊರಟೇ ಹೋದರು!

ಅದೆಲ್ಲಿಗೆ? ಅವರು ಹೇಳಲಿಲ್ಲ...
ಇಂದೆಲ್ಲಿರುವರು? ಎಂತಿರುವರು?
ಹೇಳುವವರೇ ಇಲ್ಲ...
ಅವರಿಗೂ ಇಂತನಿಸುವುದೇ? ತಿಳಿದಿಲ್ಲ...
ಜೊತೆಯಲ್ಲಿದ್ದಷ್ಟು ದಿನ ಅವರನ್ನರಿತೆನೆ?
ಗೊತ್ತಿಲ್ಲವಲ್ಲಾ....


ಹಳೆತರಲ್ಲೂ ಹೊಸತೊಂದನು ಕಂಡೆ...
ವರ್ಷಗಳ ಒಡನಾಟವಿತ್ತು...ಆದರೂ
"ನಾನಿವರನ್ನು ಬಲ್ಲೆನೇ?" ಪ್ರಶ್ನೆಯಂತೆಯೇ ಉಳಿಯಿತು...
ಅವರೆಲ್ಲರೂ ಎನಗೆ ಹೊಸಬರಂತೆ ಕಂಡರು...


ಅದೆಷ್ಟು ವರ್ಷಗಳು ಸಂದಿವೆ!
ಚಕ್ರ ಅದೆಷ್ಟು ತಿರುಗಿದೆ!!
ಎವೆ ಮುಚ್ಚಿದೆ - ಒಂದೆರಡು ಮುತ್ತುರುಳಿದವು...